ಸಕಾಲಕ್ಕೆ ಲಸಿಕೆ ಮೂಲಕ ಜಾನುವಾರುಗಳ ಆರೋಗ್ಯ ಕಾಪಾಡಿ
ಆಳಂದ:ಜೂ.23: ಸರ್ಕಾರ ಪೂರೈಸುವ ಲಸಿಕೆಯನ್ನು ಸಕಾಲಕ್ಕೆ ನೀಡುವ ಮೂಲಕ ಜಾನುವಾರುಗಳ ಆರೋಗ್ಯ ಸಂರಕ್ಷಣೆಗೆ ಪಶು ವೈದ್ಯರ ತಂಡ ಮತ್ತು ಪಶು ಪಾಲಕರು ಮುಂಜಾಗೃತೆ ವಹಿಸಬೇಕು ಎಂದು ಸಿಎಂ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ಹೇಳಿದರು.
ಪಟ್ಟಣದ ಪಶು ಸಂಗೋಪನಾ ಇಲಾಖೆಯ ಆಸ್ಪತ್ರೆಯಲ್ಲಿ ಚರ್ಮ, ಗಂಟು ರೋಗ ಲಸಿಕೆ ಹಾಗೂ ಕರಳು ಬೇನೆ ರೋಗದ ವಿರುದ್ಧ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಭೂಮಿಗೆ ಮನುಷ್ಯರಷ್ಟೇ ಜಾನುವಾರಗಳ ಜೀವÀಮುಖ್ಯವಾಗಿದೆ. ಕಾಲಕಾಲಕ್ಕೆ ಜಾನುವಾರುಗಳ ಆರೋಗ್ಯ ತಪಾಸಣೆ ಲಸಿಕೆ ನೀಡಲು ಹಿಂಜರಿಯಬಾರದು, ಚಿಕಿತ್ಸಾ ವೆಚ್ಚಕ್ಕೆ ಸರ್ಕಾರದಲ್ಲಿ ಹಣದ ಯಾವುದೇ ಕೊರತೆಯಿಲ್ಲ. ಜಾನುವಾರುಗಳ ಆರೋಗ್ಯದಲ್ಲಿ ತೊಂದರೆಯಾದರೆ ರೈತರ ಕರೆ ಮಾಡಿದರೆ ಸಕಾಲಕ್ಕೆ ವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡಿ ಆರೈಕೆಯ ಕುರಿತು ರೈತರಿಗೆ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಕಿವಿಮಾತು ಹೇಳಿದರು.
ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಅವರು ಲಸಿಕಾ ಅಭಿಯಾನದ ಮಾಹಿತಿ ಒದಗಿಸಿ ಮಾತನಾಡಿ, ಜೂ. 20ರಿಂದ ಜುಲೈ 20ವರೆಗೆ ಜಾನುವಾರುಗಳಿಗೆ ಚರ್ಮಗಂಟು ರೋಗ ಲಸಿಕೆ ಮತ್ತು ಕುರಿ, ಮೇಕೆ ಗಳಿಗೆ ಕರುಳು ಬೇನೆ ಲಸಿಕೆ ಹಾಕುವ ಅಭಿಯಾನವನ್ನು ಏರ್ಪಡಿಸಲಾಗಿದೆ. ಪಶುಪಾಲನಾ ಇಲಾಖೆಯ ಅಧಿಕಾರಿಗಳು,ಲಸಿಕೆ ದಾರರು ತಮ್ಮ ಮನೆ ಬಾಗಿಲಿಗೇ ಬಂದಾಗ ತಪ್ಪದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ, ಒಟ್ಟು 52000 ದನಗಳಿಗೆ ಚರ್ಮ ಗಂಟು ರೋಗ ಲಸಿಕೆ ಹಾಗೂ 60000 ಕುರಿ,ಮೇಕೆ,ಆಡುಗಳಿಗೆ ಗುರಿ ಹೊಂದಲಾಗಿದೆ ಎಂದರು.
ಚರ್ಮಗಂಟು ರೋಗವು ದನಗಳು ಮತ್ತು ಎಮ್ಮೆಗಳಲ್ಲಿ ಕಂಡುಬರುವ ವೈರಸ್ ಕಾಯಿಲೆಯಾಗಿದೆ. ಪಾಕ್ಸ್ ವೈರಿಡೆ ಕುಟುಂಬಕ್ಕೆ ಸೇರಿದ ಕ್ಯಾಪ್ರಿಪಾಕ್ಸ್ ವೈರಸ್ ಕುಲದ ವೈರಸ್ ಗಳಿಂದ ಈ ಕಾಯಿಲೆ ಉಂಟಾಗುತ್ತದೆ. ಎಮ್ಮೆಗಳಿಗೆ ಹೋಲಿಸಿದರೆ ದನಗಳಲ್ಲಿ ಈ ರೋಗವು ತೀವ್ರವಾಗಿರುತ್ತದೆ. ಚರ್ಮದಲ್ಲಿ ಗಂಟುಗಳು ಉಂಟಾಗುವುದು. ಇದು ಪ್ರಾಣಿಜನ್ಯ ರೋಗವಲ್ಲ ಮನುಷ್ಯರಿಗೆ ಈ ರೋಗವು ಹರಡುವುದಿಲ್ಲ. ಸೋಂಕಿತ ರಾಸುಗಳ ಹಾಲನ್ನು ಪ್ಯಾಶ್ಚರೀಕರಿಸಿ, ಕಾಯಿಸಿ ಬಳಸಬಹುದು ಎಂದರು. ಈ ರೋಗವು ಸಂದೀಪದಿ ಕೀಟಗಳು, ಸೊಳ್ಳೆಗಳು ಉಣ್ಣೆಗಳು ,ಮತ್ತು ಕಚ್ಚುವ ನೊಣಗಳಿಂದ ಹರಡುತ್ತವೆ. ಸೋಂಕಿತ ಜಾನುವಾರುಗಳ ಸಾಗಾಣಿಕೆಯಿಂದ ಸೋಂಕು ಹರಡುಬಹುದಾಗಿದೆ ನೀರು ಮತ್ತು ಆಹಾರದ ಮೂಲಕವೂ ಈ ರೋಗ ಹರಡುತ್ತದೆ ಎಂದರು.
ರೋಗದ ಲಕ್ಷಣ ಮತ್ತು ಮುಂಜಾಗೃತೆ ಕುರಿತು ವಿವರಿಸಿದ ಇಂಗಳೆ ಅವರು, ಹೈನುರಾಸುಗಳಲ್ಲಿ ಹಾಲಿನ ಇಳುವರಿಯಲ್ಲಿ ತೀವ್ರ ಇಳಿತ ಕಂಡುಬರುತ್ತದೆ ,ತೀವ್ರ ಜ್ವರ, ದೇಹದ ಬಹುತೇಕ ಭಾಗಗಳಲ್ಲಿ ಒಂದರಿಂದ ಐದು ಸೆಂಟಿಮೀಟರ್ ಗಾತ್ರದ ಚರ್ಮದ ಗಂಟುಗಳು ಕಾಣಿಸಿಕೊಳ್ಳುತ್ತದೆ, ಕೀಲುಗಳ ಬಾವು ಮತ್ತು ಊತದಿಂದಾಗಿ ರೋಗಪೀಡಿತ ರಾಸುಗಳು ಮಲಗಲು ಸಾಧ್ಯವಾಗುವುದಿಲ್ಲ, ಚರ್ಮದ ಗಂಟುಗಳು ಹಲವಾರು ತಿಂಗಳುಗಳವರೆಗೆ ಇರುತ್ತದೆ, ಗರ್ಭ ಧರಿಸಿದ ರಾಸುಗಳಲ್ಲಿ ಗರ್ಭಪಾತವಾಗಬಹುದು, ತೀವ್ರವಾದ ಸೋಂಕು ಇರುವ ಜಾನುವಾರುಗಳು ನಿಮೋನಿಯಾ ಕೆಚ್ಚಲುಬಾವು, ಕೊಳೆತ ಚರ್ಮದ ಗಾಯಗಳಿಂದಾಗಿ ಜಾನುವಾರುಗಳ ಚೇತರಿಕೆ ನಿಧಾನವಾಗಬಹುದು, ಸಾವು ಕೂಡ ಸಂಭವಿಸಬಹುದು. ಮುಂಜಾಗೃತವಾಗಿ ಪಶುವೈದ್ಯರ ಮೇಲ್ವಿಚಾರಣೆಯೊಂದಿಗೆ, ರೋಗ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆ ನೀಡಬೇಕಾಗಿರುತ್ತದೆ ಎಂದು ಹೇಳಿದರು. ಮುಂಜಾಗೃತೆಗಾಗಿ ಲಸಿಕೆ ನೀಡುವುದು, ಸೋಂಕಿತ ಪ್ರಾಣಿಗಳನ್ನು ಪ್ರತ್ಯೇಕಿಸುವುದು, ಸಾಗಾಣಿಕೆ ಮೇಲೆ ನಿಬರ್ಂಧ ಹೆರುವುದು, ಜಾನುವಾರು ಮಾರುಕಟ್ಟೆ, ಜಾನುವಾರು ಜಾತ್ರೆಗಳನ್ನು ನಿμÉೀಧಿಸುವುದು ಹಿಂಡು ಹಿಂಡಾಗಿ ಜಾನುವಾರುಗಳು ಮೇಯುವುದನ್ನು ತಪ್ಪಿಸಬೇಕು. ನೊಣ ,ಸೊಳ್ಳೆ , ಉಣ್ಣೆ ಮತ್ತು ಕೀಟಗಳನ್ನು ನಿಯಂತ್ರಿಸಬೇಕು. ಕಚ್ಚದಂತೆ ಮುಂಜಾಗ್ರತೆ ವಹಿಸಬೇಕು ಸೊಳ್ಳೆ ಪರದೆ ಇಲ್ಲವೇ ಕೀಟ ಬಲೆಗಳನ್ನು ಬಳಕೆ ಮಾಡಬೇಕು, ಕೊಟ್ಟಿಗೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕು ನಿವಾರಣ ಔಷಧಿಗಳನ್ನು ಸಿಂಪಡಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಚಾರಿ ಹಾಗೂ ವಿಸ್ತರಣಾ ಅಧಿಕಾರಿ ಶ್ರೀಕಾಂತ್ ತಟ್ಟಿ, ಗುರುಮತಾ, ಜಗನಾಥ ಕುಂಬಾರ ಹಾಗೂ ಇತರೆ ಸಿಬ್ಬಂದಿ ಹಾಜರಿದ್ದರು.