ಯೋಗದಿಂದ ನೆಮ್ಮದಿ ಸಾಧ್ಯ : ಬಸವರಾಜ ಸ್ವಾಮಿ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ23: ಯೋಗ ಮತ್ತು ಆಧ್ಯಾತ್ಮಕ್ಕೆ ಅವಿನಾಭಾವ ಸಂಬಂಧವಿದೆ. ಯೋಗ ಎಂದರೆ ಕೂಡುವುದು. ದೇಹ ಮತ್ತು ಮನಸ್ಸು ಆತ್ಮದಲ್ಲಿ ಸಂಗಮವಾಗಿದೆ. ನಮ್ಮ ಚಿತ್ತವೃತ್ತಿ ನಿವೃತ್ತಿಯ ಮೊದಲ ಮೆಟ್ಟಿಲು ಯೋಗವಾಗಿದ್ದು, ಇದರಿಂದ ನೆಮ್ಮದಿಯ ಜೀವನ ಸಾಧಿಸಬಹುದು  ಎಂದು ಸುದ್ದಿಮೂಲ ಸಂಸ್ಥೆಯ ಸಂಪಾದಕ  ಬಸವರಾಜ ಸ್ವಾಮಿ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯದ ಆವರಣದಲ್ಲಿ ಯೋಗ ಅಧ್ಯಯನ ವಿಭಾಗದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಯೋಗಾಭ್ಯಾಸ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಗವನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಭಾರತ ಗುರು ಸ್ಥಾನದಲ್ಲಿದೆ. ದೇಹ ಮತ್ತು ಮನಸ್ಸು ಆತ್ಮ ಈ ಮೂರು ಒಂದಾಗುವುದು ಕಠಿಣ. ಈ ಮೂರನ್ನು ಸೇರಿಸುವ ತಂತ್ರವೇ ಯೋಗ. ಮನಸ್ಸು ದೇಹದ ಮೂಲಕ ತಪ್ಪು ಮಾಡಿದಾಗ ಆತ್ಮ ಮನಸ್ಸನ್ನು ಸರಿದಾರಿಗೆ ತರುವ ಕೆಲಸ ಮಾಡುತ್ತದೆ. ಮನಸ್ಸನ್ನು ಅರಿವಿನಲ್ಲಿ ಲೀನ ಮಾಡುವಲ್ಲಿ ಯೋಗದ ಪಾತ್ರ ಮಹತ್ತರವಾದುದು. ಬುದ್ಧನನ್ನು ಪಾಲಿಸಿ ನಾವು ಬೌದ್ಧರಾದೇವೆ ಹೊರತು ಸಂಬುದ್ಧರಾಗಲಿಲ್ಲ, ಮಹಾವೀರನನ್ನು ಪಾಲಿಸಿ ಜೈನರಾದವೇ ಹೊರತು ಜಿನರಾಗಲಿಲ್ಲ. ಇದರಿಂದ ಪ್ರತಿಯೊಬ್ಬರು ಅಂತಿಮ ಗುರಿ ತಲುಪಿ ಪರಮ ಸಂತೋಷಿಗಳಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ  ಡಾ.ಡಿ.ವಿ. ಪರಮಶಿವಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ಯೋಗ ಎಂದರೆ ಕೇವಲ ವ್ಯಾಯಾಮವಲ್ಲ. ಅದು ಪರಿಪೂರ್ಣ ಜೀವನ ನಡೆಸಲು ಮೊದಲ ಮೆಟ್ಟಿಲು. ಲೌಕಿಕ ಬದುಕಿನ ಎಡರು-ತೊಡರುಗಳನ್ನು ನಿವಾರಿಸಿ ಒಳ್ಳೆಯ ಬದುಕನ್ನು ನಡೆಸಲು ಮಾನಸಿಕ ಆರೋಗ್ಯ ತುಂಬಾ ಮುಖ್ಯ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಯೋಗ ಸಹಕಾರಿಯಾಗಲಿದೆ ಎಂದು ಹೇಳಿದರು.
ಯೋಗ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮಾಧವ ಪೆರಾಜೆ ಅವರು ಗಣ್ಯರನ್ನು ಸ್ವಾಗತಿಸಿದರು. ಅಧ್ಯಾಪಕರಾದ ಸಿದ್ಧರಾಮಯ್ಯ ಅವರು ನಿರೂಪಿಸಿದರು. ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯತಗಲ್ ಅವರು ವಿಶೇಷ ಉಪನ್ಯಾಸಕರ ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ಬೋಧಕ-ಬೊಧಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.