ವೈಎಸ್ ಆರ್ ಪಕ್ಷದ ಕಚೇರಿ ಧ್ವಂಸ
(ಸಂಜೆವಾಣಿ ವಾರ್ತೆ)
ಗುಂಟೂರು, ಜೂ.23: ಆಂಧ್ರಪ್ರದೇಶದಲ್ಲಿ ಚಂದ್ರ ಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರವು ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಹಿಂದಿನ ಮುಖ್ಯಮಂತ್ರಿ ಹಾಗೂ ವೈಎಸ್ಸಾರ್ ಕಾಂಗ್ರೆಸ್ ನಾಯಕ ಜಗನ್‌ಮೋಹನ ರೆಡ್ಡಿಯವರ  ವೈಎಸ್ಸಾ‌ರ್ ಕಾಂಗ್ರೆಸ್ ಪಕ್ಷದ ವಿರುದ್ದ ಸೇಡು ತೀರಿಸಿಕೊಳ್ಳಲು ಮುಂದಾಗಿದೆ.
 ಗುಂಟೂರು ಸನಿಹದ ತಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ವೈಎಸ್ಸಾ‌ರ್ ಕಾಂಗ್ರೆಸ್ ಕೇಂದ್ರ ಕಚೇರಿ ಕಟ್ಟಡವನ್ನು ಅಕ್ರಮ ಕಟ್ಟಡ ಎಂಬ ದೂರಿನ ಮೇರೆಗೆ ಅಲ್ಲಿನ ರಾಜ್ಯ ಸರ್ಕಾರ ಧ್ವಂಸಗೊಳಿಸಿದೆ.
ಈ ಹಿಂದೆ 2019ರಲ್ಲಿ ಜಗನ್‌ಮೋಹನ ರೆಡ್ಡಿ ಮುಖ್ಯಮಂತ್ರಿ ಆದ ನಂತರ ವಿಜಯವಾಡ ಸನಿಹದ ಉಂಡವಳ್ಳಿಯಲ್ಲಿ ಚಂದ್ರಬಾಬು ನಾಯ್ಡು ಪ್ರಜಾವೇದಿಕೆ ಹೆಸರಿನ ಜನತಾದರ್ಶನ ವೇದಿಕೆಯನ್ನು ವೈಎಸ್ಸಾರ್ ಕಾಂಗ್ರೆಸ್ ಸರ್ಕಾರಧ್ವಂಸಮಾಡಿತ್ತು.ಜನರ ಅಹವಾಲು ಆಲಿಸಲು ನಿರ್ಮಿಸಿದ್ದ ಪ್ರಜಾವೇದಿಕೆಯನ್ನು ನಾಯ್ಡು ತಮ್ಮ ಮನೆ ಆವರಣದಲ್ಲೇ ಕಟ್ಟಿದ್ದರು. ಅದು ತಾತ್ಕಾಲಿಕ ಕಟ್ಟಡವಾಗಿತ್ತು  ಆದರೂ ಜಗನ್ ಸರ್ಕಾರ ಅದನ್ನು ಧ್ವಂಸ ಮಾಡಿತ್ತು.