ದೇವದಾರಿ ಅರಣ್ಯದಲ್ಲಿ ಗಣಿಗಾರಿಕೆ ತಡೆ ಹಿಡಿದ ರಾಜ್ಯ ಸರ್ಕಾರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.23: ಜಿಲ್ಲೆಯ ಸಂಡೂರು ತಾಲ್ಲೂಕಿನ ಕುಮಾರಸ್ವಾಮಿ ಗುಡಿ ಸುತ್ತಮುತ್ತಲಿನ  ದೇವದಾರಿ ಪ್ರದೇಶದ  ಅರಣ್ಯ ಜಮೀನನ್ನು ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (ಕೆಐಒಸಿಎಲ್) ಹಸ್ತಾಂತರ ಮಾಡದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸೂಚಿಸಿದ್ದಾರೆ.
ಈ ಕುರಿತು ಮೊನ್ನೆ ಪತ್ರ ಬರೆದಿರುವ ಸಚಿವರು, ಕೆಐಒಸಿಎಲ್ ಕಂಪನಿಯು ದೇವದಾರಿ ಶ್ರೇಣಿಯ 401.5761 ಹೆಕ್ಟೇ‌ರ್ ಅರಣ್ಯ ಜಮೀನಿನಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಅರಣ್ಯ ತೀರುವಳಿ ಪಡೆದಿದೆ. ಸದ್ಯ, ಅರಣ್ಯ ತೀರುವಳಿ ಗುತ್ತಿಗೆ ಪತ್ರಕ್ಕೆ ಸಹಿ ಮತ್ತು ಜಮೀನು ಹಸ್ತಾಂತರ ಬಾಕಿ ಇದೆ
ಗಣಿಗಾರಿಕೆ ಮಾಡುವಾಗ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಕೆಐಒಸಿಎಲ್ ಕಂಪನಿಯಿಂದ ಸಾಕಷ್ಟು ಲೋಪದೋಷ ಆಗಿದ್ದವು. ಅರಣ್ಯ ಕಾಯ್ದೆ ಉಲ್ಲಂಘನೆ ಆಗಿತ್ತು. ಕೇಂದ್ರದ ಉನ್ನತಾಧಿಕಾರ ಸಮಿತಿಯು (ಸಿಇಸಿ) ನೀಡಿದ್ದ ನಿರ್ದೇಶನಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವಲ್ಲಿ ಕೆಐಒಸಿಎಲ್‌ ಈ ಹಿಂದೆ ವಿಫಲವಾಗಿದೆ ಎಂಬ ದೂರುಗಳಿವೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿಇಸಿ ನಿರ್ದೇಶನಗಳನ್ನು ಕೆಐಒಸಿಎಲ್ ಅನುಷ್ಠಾನಗೊಳಿಸುವವರೆಗೆ ಅರಣ್ಯ ತೀರುವಳಿ ಗುತ್ತಿಗೆ ಪತ್ರ ಮಾಡಿಕೊಡಬಾರದು. ಕಂಪನಿಗೆ ಅರಣ್ಯ ಜಮೀನನ್ನು ಹಸ್ತಾಂತರಿಸಬಾರದೆಂದು ಸಚಿವರು  ನಿರ್ದೇಶನ ನೀಡಿದ್ದಾರೆ.
ಹಣಕಾಸು ಇಲಾಖೆಗೆ ಕಳಿಸಿದೆ: ಕುಮಾರಸ್ವಾಮಿ
ಬಳ್ಳಾರಿ ಜಿಲ್ಲೆಯ ಕೆಐಒಸಿಎಲ್‌ನ ದೇವದಾರಿ ಗಣಿಗಾರಿಕೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಕೈಗಾರಿಕೆ ಸ್ಥಾಪನೆ ಕುರಿತು ಬಂದ ಕಡತವನ್ನು ಸಹಿ ಮಾಡಿ ಹಣಕಾಸು ಇಲಾಖೆಗೆ ಕಳುಹಿಸಿದ್ದೇನೆ  ಅಷ್ಟೇ, ಅಲ್ಲಿ ಗಣಿಕೆ ನಡೆಸಲು ಈ ಮೊದಲೇ ಸಿದ್ದರಾಮಯ್ಯನವರ ರಾಜ್ಯ ಸರ್ಕಾರವೇ ಅನುಮತಿ‌ನೀಡಿದೆಂದು  ಕೇಂದ್ರ ಬೃಹತ್ ಕೈಗಾರಿಕೆ  ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ‌
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗಲೇ   ಕೆಐಒಸಿಎಲ್‌ಗೆ ಅರಣ್ಯ ಜಮೀನು ನೀಡಲಾಗಿತ್ತು.  ಕಂಪನಿಯ ಗಣಿಗಾರಿಕೆ ಕಾರ್ಯಾರಂಭಕ್ಕೆ 1,738 ರೂ ಕೋಟಿ ಬೇಕು. ಅದಕ್ಕೆ ನಾನು ಸಹಿ ಹಾಕಿ ಆರ್ಥಿಕ ಇಲಾಖೆಗೆ ಕಳುಹಿಸಿದ್ದೇನೆ ಹೊರತು ಅದು ನನ್ನಿಂದಲೇ ಎಂದು ಬಿಬಿಂಸಲು ಹೊರಟಿರುವುದು ಸರಿಯಲ್ಲ ಎಂದಿದ್ದಾರೆ.
ಈಗಾಗಲೇ ಗಣಿಗಾರಿಕೆಗೆ ಸಂಬಂಧಿಸಿ ಎಲ್ಲ ಪ್ರಕ್ರಿಯೆ ಮುಗಿದಿವೆ. ಅರಣ್ಯ ಇಲಾಖೆಗೆ ಪರ್ಯಾಯ ಜಮೀನು ನೀಡಲಾಗಿದೆ. ರಾಜ್ಯ ಸರ್ಕಾರಕ್ಕೆ 518 ಕೋಟಿ ರೂ ಹಣ ಪಾವತಿಸಲಾಗಿದೆ. ಸಂಡೂರಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯೂ ಮುಗಿದಿದೆ. ವಿನಾಕಾರಣ ಸಮಾಜ ಪರಿವರ್ತನಾ ಸಮುದಾಯದ  ಎಸ್.ಆ‌ರ್. ಹಿರೇಮಠ  ನನ್ನ ಹೆಸರು ಯಾಕೆ ಉಲ್ಲೇಖಿಸಿದ್ದಾರೆ ಎಂದು ಗೊತ್ತಿಲ್ಲವೆಂದಿದ್ದಾರೆ.
ಗಣಿಗಾರಿಕೆ ನಡೆಯುವ ದೇವದಾರಿ ಪ್ರದೇಶದಲ್ಲಿ  ದಟ್ಟ ಅರಣ್ಯವಿಲ್ಲ. ದೊಡ್ಡ ಗಾತ್ರದ ಮರಗಳೂ ಇಲ್ಲ. ಕುರುಚಲು ಗಿಡಗಳು ಮಾತ್ರ ಇವೆ. ಸಾರ್ವಜನಿಕ ವಲಯದ ಕಂಪನಿ ಉಳಿಯಬೇಕು. ಉದ್ಯೋಗ ಸೃಷ್ಟಿಯಾಗಬೇಕೆಂದರೆ ಅನುಮತಿ ನೀಡಬೇಕಿದೆ.