ವಿದ್ಯೆಯಿಂದ ಬದುಕಿಗೆ ಬೆಳಕು:ಬನ್ನೂರು ರಾಜು
ಸಂಜೆವಾಣಿ ನ್ಯೂಸ್
ಮೈಸೂರು:ಜೂ.23:- ವಿದ್ಯೆ ಕತ್ತಲಿನಿಂದ ಬೆಳಕಿನತ್ತ ಕರೆದೊಯ್ಯುವ ಜ್ಞಾನ ಜ್ಯೋತಿಯಾಗಿದ್ದು ಅಮೃತಮಯವಾದ ಇಂತಹ ವಿದ್ಯೆ ಯಾರಲ್ಲಿ ಇರುವುದಿಲ್ಲವೋ ಅವರು ಬದುಕಿದ್ದೂ ಸತ್ತಂತೆ ಎಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯ ಪಟ್ಟರು.
ನಗರದ ಒಂಟಿಕೊಪ್ಪಲಿನ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಪ್ರಸ್ತುತ ಸಾಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿತರಾದ ವಿವಿಧ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಶಾಲೆಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಶಿಕ್ಷಣವು ಶಾಶ್ವತವಾದ ಒಂದು ಅಮೂಲ್ಯ ಸಂಪತ್ತಾಗಿದ್ದು ಇದನ್ನು ಯಾರು ಬೇಕಾದರೂ ಗಳಿಸಬಹುದಾಗಿದ್ದು ಶಿಕ್ಷಣ ಎನ್ನುವುದು ಸರ್ವರ ಪಾಲಿನ ಸಂಜೀವಿನಿ ಆಗಿರುವುದರಿಂದ ಎಂತಹ ಕಷ್ಟವಿದ್ದರೂ ಏನೇ ತೊಂದರೆ ಬಂದರೂ ಶಿಕ್ಷಣದಿಂದ ಯಾರೂ ದೂರವಾಗಬಾರದೆಂದರು.
ಉತ್ತಮ ಭವಿಷ್ಯದ ದೃಷ್ಟಿ ಯಿಂದ ಪ್ರತಿಯೊಬ್ಬರೂ ವಿದ್ಯಾರ್ಥಿ ದಿಸೆಯಲ್ಲಿಯೇ ವಿದ್ಯೆಯ ಮಹತ್ವ ಅರಿತು ಶಿಕ್ಷಣ ಪಡೆಯುವತ್ತ ಆಸಕ್ತಿಯಿಂದ ಮುನ್ನಡೆಯಬೇಕು.ಸನ್ಮಾರ್ಗದಲ್ಲಿ ವಿದ್ಯಾವಂತರಾಗುವುದೆಂದರೆ ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡುವುದಾಗಿದೆ. ಹಾಗಾಗಿ ತಾವಷ್ಟೇ ಶಿಕ್ಷಿತರಾದರೆ ಸಾಲದು. ನೆರೆಹೊರೆಯವರನ್ನೂ ಶಿಕ್ಷಣ ಕಲಿಕೆಯತ್ತ ಪ್ರೇರೇಪಿಸಿ ಇಡೀ ಸಮಾಜವನ್ನು ಶಿಕ್ಷಣಮಯ ಮಾಡಬೇಕು. ವಿಶೇಷವಾಗಿ ವಿದ್ಯಾರ್ಥಿಗಳ ನಡೆ ಸಂಪೂರ್ಣವಾಗಿ ಸರ್ಕಾರಿ ಶಾಲೆಗಳ ಕಡೆ ಆಗುವಂತೆ ಮಾಡಬೇಕು. ಇಂದು ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆಯಿಲ್ಲ. ಗುಣಮಟ್ಟದ ಶಿಕ್ಷಣದಲ್ಲಿ ಸರ್ಕಾರಿ ಶಾಲೆಗಳೇ ಮುಂದಿದ್ದು ಈ ಬಾರಿಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶ ಇದನ್ನು ಸಾಬೀತು ಪಡಿಸಿದೆ. ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಸೀಟು ಸಿಗದಂತಹ ಪರಿಸ್ಥಿತಿಯಿದೆ. ಇದು ಉತ್ತಮ ಬೆಳವಣಿಗೆಯಾ ಗಿದ್ದು ಇಂತಹದ್ದನ್ನು ಎಲ್ಲರಿಗೂ ತಿಳಿಸುವ ಕೆಲಸವನ್ನು ಸರ್ಕಾರಿ ಶಾಲೆಗಳಲ್ಲಿ ಓದಿದ ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳು ಬಹಳ ಕಾಳಜಿಯಿಂದ ಮಾಡಬೇಕಾಗಿದೆ. ಸರ್ಕಾರಿ ಶಾಲೆಗಳು ಸದೃಡಗೊಂಡಲ್ಲಿ ಸಕಲರಿಗೂ ಸುಲಭವಾಗಿ ಶಿಕ್ಷಣ ಕೈಗೆಟಕುತ್ತದೆ. ಇದಾದಾಗಲೇ ಸರ್ವರಿಗೂ ಶಿಕ್ಷಣ, ಕಡ್ಡಾಯ ಶಿಕ್ಷಣ ಎನ್ನುವ ಘೋಷಣೆಗಳು ಸಾರ್ಥಕವಾಗುತ್ತವೆಯೆಂದು ಹೇಳಿದರು.
ಅಂಕಗಳ ಹಿಂದಷ್ಟೇ ಓಡ ಬೇಡಿ*:ಮುಂದಿನ ವಿದ್ಯಾಭ್ಯಾಸದ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಅಂಕಗಳು ಬೇಕು ನಿಜ. ಆದರೆ ಅಂಕಗಳೇ ಜೀವನವಲ್ಲ. ಹಾಗಾಗಿ ವಿದ್ಯಾರ್ಥಿಗಳು ವಿದ್ಯೆ ಕಲಿಯುತ್ತ ಕಲಿಯುತ್ತಲೇ ಅಂಕಗಳ ಜತೆ ಜತೆಗೇ ಮಾನವೀಯ ಗುಣಗಳುಳ್ಳ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಅವುಗಳನ್ನು ಬೆಳೆಸಿಕೊಳ್ಳುತ್ತಾ ಹೋಗಬೇಕು. ಇದು ಸ್ಪರ್ಧಾ ಜಗತ್ತಾದ್ದರಿಂದ ಅಂಕಗಳ ವೇಗದ ಸ್ಪರ್ಧೆಯಲ್ಲಿ ನಮ್ಮ ನೆಲದ ಮೌಲ್ಯಾಧಾರಿತ ಸಂಸ್ಕೃತಿಯನ್ನು ಎಂದಿಗೂ ಕಡೆಗಣಿಸಬಾರದೆಂದ ಅವರು, ವಿದ್ಯಾರ್ಥಿಗಳ ಸುಂದರ ಭವಿಷ್ಯ ಇರುವುದೇ ಮಾನವೀಯ ಸಂಸ್ಕೃತಿಯುಳ್ಳ ಸನ್ನಡತೆಯ ಬದುಕಿನಲ್ಲಾದ್ದರಿಂದ ಇದು ಅವರ ಜೀವನ ಪಾಠವಾಗ ಬೇಕೆಂದು ಹೇಳಿದರು.
ಇದಕ್ಕೂ ಮುನ್ನ ಸಂಸ್ಕೃತಿ ಚಿಂತಕ ಡಾ.ಕೆ.ರಘುರಾಮ್ ವಾಜಪೇಯಿ ಅವರು ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿಭಾವಂತರೇ ಆಗಿರುತ್ತಾರೆ. ಕೆಲವರು ಪಠ್ಯದಲ್ಲಿ ಮುಂದಿದ್ದರೆ ಮತ್ತೆ ಕೆಲವರು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮದೇ ಆದ ವಿಶಿಷ್ಟ ಪ್ರತಿಭೆಯಿಂದ ಮುಂದಿರುತ್ತಾರೆ. ಹಾಗಾಗಿ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸುವುದು ನಮ್ಮ ಸಮಾಜದ ಕರ್ತವ್ಯವಾಗಬೇಕು. ಇನ್ನು ಓದುವ ವಿಷಯಕ್ಕೆ ಬಂದರೆ ಇಪ್ಪತ್ತು ವರ್ಷಗಳು ವಿದ್ಯಾರ್ಥಿಗಳು ಪರಿಶ್ರಮದಿಂದ ಓದಿ ಗುರಿ ಸಾಧಿಸಿದರೆ ಇನ್ನು ಉಳಿದ ಎಂಬತ್ತು ವರ್ಷಗಳು ಸುಖವಾಗಿ ಜೀವನ ಮಾಡ ಬಹುದೆಂದ ಅವರು, ಸಮಯ ಪಾಲನೆಯೊಡನೆ ವಿದ್ಯಾಭ್ಯಾಸಿ ಗಳಲ್ಲಿ ಸ್ಮರಣ, ಧಾರಣ, ಗ್ರಹಣ ಬಹು ಮುಖ್ಯವಾಗಿ ಇರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಂಚೇಗೌಡನ ಕೊಪ್ಪಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಕೆ.ಎನ್. ಕಲ್ಪನಾ ಅವರು ಪ್ರಾಯೋಜಿಸಿದ ಪ್ರತಿಭಾ ಪುರಸ್ಕಾರವನ್ನು ಪ್ರಸ್ತುತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿವಿಧ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಒಂಟಿ ಕೊಪ್ಪಲಿನ ಸರ್ಕಾರಿ ಪ್ರೌಢಶಾಲೆಯ ಮಹಾದೇವಿ ಮತ್ತು ಸೌಭಾಗ್ಯ, ವಿನಾಯಕ ನಗರದ ವಿವೇಕಾನಂದ ಪ್ರೌಢಶಾಲೆಯ ಚಂದನ್, ಮಂಚೇಗೌಡನ ಕೊಪ್ಪಲಿನ ಪ್ರೌಢಶಾಲೆಯ ಹರ್ಷ, ಮೇದರ ಬ್ಲಾಕ್ ಸರ್ಕಾರಿ ಪ್ರೌಢಶಾಲೆಯ ಆರ್. ರಚನಾ, ಕೈಲಾಸಪುರಂ ಸರ್ಕಾರಿ ಪ್ರೌಢಶಾಲೆಯ ಜ್ಯೋತಿ ವಿಶ್ವಕರ್ಮ, ಎನ್.ಆರ್. ಮೊಹಲ್ಲಾದ ಸರ್ಕಾರಿ ಪ್ರೌಢಶಾಲೆಯ ಚಿರಾಗ್, ಬನ್ನಿ ಮಂಟಪದ ಸರ್ಕಾರಿ ಪ್ರೌಢಶಾಲೆಯ ನೇತ್ರಾವತಿ, ಕುಂಬಾರ ಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ಅರ್ಜುನ್ ಅವರುಗಳಿಗೆ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಮತ್ತು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಪ್ರಾರಂಭದಲ್ಲಿ ಹಿಂದಿ ಭಾಷಾ ಸಂಪನ್ಮೂಲ ಶಿಕ್ಷಕರಾದ ಡಾ. ಎಸ್. ವಿಜಿ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರಲ್ಲದೆ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.
ಮುಖ್ಯ ಶಿಕ್ಷಕ ಕೆ.ಜಿ.ಮಹೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದೈಹಿಕ ಶಿಕ್ಷಣದ ವಿಶೇಷಾಧಿಕಾರಿ ವೆಂಕಟೇಶ್, ಯಾದವಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಾಗವೇಣಿ, ಪ್ರೌಢಶಾಲಾ ಶಿಕ್ಷಕರಾದ ಬಸವರಾಜು, ಎಸ್.ನಂಜುಂಡನಾಯಕ, ಭಾರತಿ ಎಸ್. ಶಾಸ್ತ್ರಿ, ಎ.ತಾರಾ, ಲಕ್ಷ್ಮೀ ಜಿ.ಭಟ್, ವೈ.ಪದ್ಮಾ ಹಾಗು ಪತ್ರಕರ್ತ ಕಿಶೋರ್ ಮುಂತಾದವರು ಉಪಸ್ಥಿತರಿದ್ದರು.