ಯೋಗ ಧರ್ಮಾತೀತವಾದುದು: ದಿನೇಶ್ ಗುಂಡೂರಾವ್
ಸಂಜೆವಾಣಿ ನ್ಯೂಸ್
ಮೈಸೂರು:ಜೂ.23:- ಯೋಗಕ್ಕೆ ಯಾವುದೇ ಧರ್ಮ ಇಲ್ಲ. ಅದು ಧರ್ಮವನ್ನು ಮೀರಿದ್ದಾಗಿದ್ದು, ಎಲ್ಲರೂ ಯೋಗವನ್ನು ಅಭ್ಯಾಸ ಮಾಡಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟದಿಂದ ಆಯೋಜಿಸಿರುವ ರಾಜ್ಯಮಟ್ಟದ ಪ್ರಥಮ ಯೋಗ ಸಮ್ಮೇಳನ-2024 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗವನ್ನು ಇಂತಿಷ್ಟೇ ವಯಸ್ಸಿನವರೇ ಮಾಡಬೇಕು ಎನ್ನುವ ನಿಯಮವೂ ಇಲ್ಲ. ಕಿರಿಯರಿಂದ ಹಿಡಿದು ವೃದ್ಧರ ತನಕವೂ ಅಭ್ಯಾಸ ಮಾಡಬಹುದು. ಆದರೆ ಆ ವಯೋಮಾನಕ್ಕೆ ತಕ್ಕಂತೆ ಇರುವ ಆಸನಗಳನ್ನು ಮಾಡಬೇಕು. ಇದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಹಾಗೂ ಮನಸ್ಸಿನ ಏಕಾಗ್ರತೆ ಶಕ್ತಿ ಹೆಚ್ಚುತ್ತದೆ ಎಂದರು.
ಭಾರತ ದೇಶದ ದೊಡ್ಡ ಆಸ್ತಿ ಎಂದರೆ ಜನಸಂಖ್ಯೆ ಇಲ್ಲಿರುವ ಎಲ್ಲರೂ ಆರೋಗ್ಯದಿಂದ ಇದ್ದರೆ ಅದೊಂದು ರೀತಿ ಸಂಪನ್ಮೂಲ. ದೇಶದ ಪ್ರತಿಯೊಬ್ಬರು ಸಶಕ್ತ ಆಸ್ತಿಯಾಗಬೇಕಾದರೇ ಯೋಗಾಭ್ಯಾಸವನ್ನು ರೂಢಿಸಿಕೊಂಡು ಆರೋಗ್ಯವಂತರಾಗಬೇಕು. ಆಗ ನಮ್ಮ ದೇಶವನ್ನು ಹಿಡಿಯಲು ವಿಶ್ವದ ಯಾವ ಪ್ರಭಾವಶಾಲಿಯಿಂದಲೂ ಸಾಧ್ಯವಾಗುವುದಿಲ್ಲ ಎಂದು ಅವರು ಹುರುಪಿನಿಂದ ಹೇಳಿದರು.
ಆಧ್ಯಾತ್ಮಿಕವಾದ ಅಭ್ಯಾಸಕ್ಕೆ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿರುವುದೇ ಯೋಗ. ಆದ್ದರಿಂದ ನಿರಂತರವಾಗಿ ಯೋಗಾಭ್ಯಾಸದಲ್ಲಿ ತೊಡಗಿದರೇ ಮನುಷ್ಯನ ವ್ಯಕ್ತಿತ್ವ ಪರಿಪೂರ್ಣವಾಗಿ ಹೊರಹೊಮ್ಮುತ್ತದೆ. ಆತನಲ್ಲಿ ತೇಜಸ್ಸು ಹೆಚ್ಚಾಗಿ, ಶರೀರವನ್ನು ನಿಗ್ರಹಿಸುವ ದೃಢತೆ ಬೆಳೆಯುತ್ತದೆ. ಯೋಗ, ಧ್ಯಾನ, ಪ್ರಾಣಾಯಾಮದಿಂದ ಒಳ್ಳೆಯ ಪರಿಣಾಮಗಳು ತನ್ನಿಂದ ತಾನೇ ಉಂಟಾಗುತ್ತವೆ. ಆಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ. ಆದ್ದರಿಂದ ಯೋಗಾಭ್ಯಾಸದ ಅನುಕೂಲವನ್ನು ಕೇವಲ ತಿಳಿದುಕೊಂಡರಷ್ಟೇ ಸಾಲದು. ಅದನ್ನು ರೂಢಿಸಿಕೊಳ್ಳುವ ತೀರ್ಮಾನ ಮಾಡಬೇಕು. ಇಚ್ಛಾಶಕ್ತಿಯನ್ನು ಬೆಳೆಸಿಕೊಂಡು ಶಿಸ್ತಿನಿಂದ ಯೋಗಾಭ್ಯಾಸ ಮಾಡಿದರೇ ಉತ್ತಮ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದರು.
ಯೋಗಕ್ಕೆ ಒಂದು ಪರಂಪರೆಯೇ ಇದೆ. ಸ್ವಾಮಿ ವಿವೇಕಾನಂದರು ಷಿಕಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ನಮ್ಮ ಯೋಗದ ಬಗ್ಗೆ ಪರಿಚಯ ಮಾಡಿಸಿದ್ದಾರೆ. ಯೋಗದ ಮುಖಾಂತರ ನಮ್ಮ ದೇಶದ ಭವ್ಯ ಪರಂಪರೆ, ಸಂಸ್ಕೃತಿ, ಜ್ಞಾನವನ್ನು ವಿಶ್ವಕ್ಕೆ ತೋರ್ಪಡಿಸಲು ಸಾಧ್ಯ ಎನ್ನುವುದನ್ನು ಆಗಲೇ ತಿಳಿಸಿಕೊಟ್ಟಿದ್ದಾರೆ ಎಂದು ದಿನೇಶ್ ಗುಂಡೂರಾವ್ ಇತಿಹಾಸವನ್ನು ಮೆಲುಕು ಹಾಕಿದರು.
ಪಂತಜಲಿ ಯೋಗಾಶ್ರಮ ಟ್ರಸ್ಟ್ ಸಂಸ್ಥಾಪಕ ಪ್ರಕಾಶ ಗುರೂಜಿ ಮಹರ್ಷಿ ಪತಂಜಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಯೋಗ ಛಾಯಾಚಿತ್ರ ಪ್ರದರ್ಶನವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಉದ್ಘಾಟಿಸಿದರು.
ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ, ಬೇಬಿ ಮಠದ ಡಾ.ತ್ರಿನೇತ್ರ ಮಹಾಂತ ಸ್ವಾ?ಮೀಜಿ ಸಾನಿಧ್ಯ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆ.ಎಲ್.ಶಂಕರನಾರಾಯಣ ಜೋಯಿಷ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಹರೀಶ್ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಡಾ.ಕೆ.ಎಚ್.ಪ್ರಸಾದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಿ.ಸಿ.ಕುಮಾರಸ್ವಾಮಿ, ಡಾ.ಲಕ್ಷ್ಮೀ ನಾರಾಯಣ ಶೆಣೈ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಯೋಗ ಸಮ್ಮೇಳನ ಸಮಿತಿ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಮತ್ತಿತರರು ಹಾಜರಿದ್ದರು.