ಹೊಟೇಲ್, ಪಾನೀಪುರಿ, ಗೋಬಿ ಅಂಗಡಿ, ಪಾಸ್ಟ್ ಪುಡ್ ಗಳಿಗೆ ಬೇಟಿ ನೀಡಿ ಪರಿಶೀಲನೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜೂ.23:- ಹೋಟೆಲ್, ಹಾಸ್ಟೆಲ್,ಶುಭ ಸಮಾರಂಭ ಸೇರಿದಂತೆ ಹಲವೆಡೆ ಆಹಾರ ಸೇವಿಸಿ ಅಸ್ವಸ್ಥಗೊಳ್ಳುತ್ತಿರುವ ಘಟನೆಗಳು ನಿರಂತರವಾಗಿ ಎಲ್ಲೆಡೆ ನಡೆಯುತ್ತಲೇ ಇವೆ. ಇದರೊಂದಿಗೆ ಕಲುಷಿತ ಆಹಾರ ಸೇವಿಸಿ ಆರೋಗ್ಯ ಹದಗೆಡಿಸಿ ಕೊಳ್ಳುತ್ತಿರುವ ಸಂಖ್ಯೆಯೂ ಏರುತ್ತಲೇ ಇದೆ. ಇದರಿಂದಾಗಿ ಸರ್ಕಾರ ಸುರಕ್ಷಿತ ಆಹಾರಕ್ಕೆ ಆದ್ಯತೆ ನೀಡ ಬೇಕೆಂಬ ಉದ್ದೇಶದಿಂದ ಇತ್ತೀಚೆಗೆ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣದ(ಕಲರ್) ಬಳಕೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ, ಇದರ ಬೆನ್ನಲ್ಲೆ ಕೆ.ಆರ್.ನಗರ ಪಟ್ಟಣದ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಮತ್ತು ಆಹಾರ ಸಂರಕ್ಷಣಾ ಅಧಿಕಾರಿ ಸಂದೀಪ್ ಅವರುಗಳ ತಂಡ ಜಂಟಿಯಾಗಿ ಹಲವೆಡೆಗಳಲ್ಲಿರುವ ಹೊಟೇಲ್, ಪಾನೀಪುರಿ, ಗೋಬಿ ಅಂಗಡಿ, ಪಾಸ್ಟ್ ಪುಡ್ ಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಕೆಲವೊಂದು ಎಚ್ಚರಿಕೆ ನೀಡಿದರು.
ಪಾನಿಪುರಿ, ಗೋಬಿ ಮಂಚೂರಿ, ಕಬಾಬ್ ಸೆಂಟರ್, ನೂಡಲ್ಸ್ ಸೆಂಟರ್ ಗಳ ಮೇಲೆ ತಪಾಸಣೆ ನಡೆಸಿ, ಸ್ವಚ್ಛತೆ, ಗುಣಮಟ್ಟ, ಕಲಬೆರಕೆ, ಬಗ್ಗೆ ಕೂಲಂಕುಷ ಪರೀಕ್ಷೆ ನಡೆಸಿ, ಕೆಲವರಿಗೆ ದಂಡ, ಕೆಲವರಿಗೆ ನೋಟಿಸ್ ಮತ್ತು ಕೆಲವರಿಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಲಾಯಿತು.
ಎಷ್ಟೋ ಜನ ಸರಿಯಾಗಿ ಉಗುರು ಕತ್ತರಿಸಿರುವುದಿಲ್ಲ.ಕಡಿಮೆ ದರ್ಜೆಯ ಟೊಮೆಟೋ ಸಾಸ್ ಉಪಯೋಗಿಸುತ್ತಿದ್ದಿರು.ಆಹಾರ ಪದಾರ್ಥಗಳ ಮೇಲೆ, ಪ್ಲಾಸ್ಟಿಕ್ ಕವರ್ ಹಾಕಿರುವುದಿಲ್ಲ. ಕೆಲವು ಕಡೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ನ್ಯೂಸ್ ಪೇಪರ್‍ನಲ್ಲಿ ಹಾಕಿದ್ದರು. ಯಾರೊಬ್ಬರೂ ತಲೆಗೆ ಕ್ಯಾಪ್, ಕೈಗವಸು ಹಾಕಿರಲಿಲ್ಲ ಈ ಬಗ್ಗೆ ಕೆಲವರಿಗೆ ನೋಟಿಸ್ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ತಿಳಿಸಿದರು.
ಕಲುಷಿತ ಆಹಾರದ ಮೂಲಕ ದೇಹವನ್ನು ಪ್ರವೇಶಿಸುವ ಬ್ಯಾಕ್ಟೀರಿಯಾ, ವೈರಸ್‍ಗಳು, ಪರಾವಲಂಬಿಗಳು ಅಥವಾ ರಾಸಾಯನಿಕ ಪದಾರ್ಥ ಗಳಿಂದ 200ಕ್ಕೂ ಹೆಚ್ಚು ರೋಗಗಳು ಹರಡುತ್ತವೆ. ಇಷ್ಟಾದರೂ ತಿನ್ನುವ ಆಹಾರದ ಸ್ವಚ್ಛತೆಯ ಬಗ್ಗೆ ಹೆಚ್ಚು ಒತ್ತು ನೀಡುತ್ತಿಲ್ಲ. ಬೀದಿಬದಿ ತಳ್ಳುಗಾಡಿಗಳಲ್ಲಿ ಬಳಸಿದ ಎಣ್ಣೆಯನ್ನೇ ಪದೇ ಪದೆ ಬಳಸುವ ಪ್ರತೀತಿ ಈಗಲೂ ಇದೆ. ಅದರಿಂದ ಉಂಟಾಗಬಹುದಾದ ಆರೋಗ್ಯದ ಗಂಭೀರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಎಚ್ಷೆತ್ತು ಕೊಳ್ಳ ಬೇಕು ಎಂದು ಮಾಹಿತಿ ನೀಡಿದರು.
ನಿರಂತರವಾಗಿ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಸಮಸ್ಯೆ ಕಂಡುಬಂದರೆ ತಿಳಿವಳಿಕೆ ಮೂಡಿಸಲಾಗುತ್ತದೆ. ಬಳಸಲಾಗುವ ಮಸಾಲೆಯನ್ನು ಕ್ರೋಡೀಕರಿಸಲಾಗುತ್ತದೆ. ವಿವಿಧ ಹಂತಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಎಲ್ಲರೂ ಸಹ ಕೈಗವಸು, ತಲೆಗೆ ಕ್ಯಾಪ್ ಹಾಕುವಂತೆ ತಿಳಿಸಲಾಯಿತು. ಕೆಲವರು ತಳ್ಳುವ ಗಾಡಿಯಲ್ಲಿ ಮೀನನ್ನು ನೇತು ಹಾಕಿದ್ದರು. ಕೆಲವರು ಪಾನಿಗೆ ಮಾವಿನ ಕಾಯಿ ಚೂರುಗಳನ್ನು ಹಾಕಿದ್ದರು, ಅದನ್ನು ಕಂಡ ಆರೋಗ್ಯಾಧಿಕಾರಿಗಳು ಈ ರೀತಿ ಮಾರಾಟಕ್ಕೆ ಅವಕಾಶವಿಲ್ಲ ಇದು ಆರೋಗ್ಯಕ್ಜೆ ಹಾನಿಕರವೆಂದು ತೆಗೆಯಲು ತಿಳಿಸಲಾಯಿತು. ಎಲ್ಲರಿಗೂ ಎಚ್ಚರಿಕೆ ನೀಡಿ, ಮುಂದಿನ ಬಾರಿ ಬಂದಾಗ ಸರಿಪಡಿಸಿಕೊಳ್ಳದಿದ್ದರೆ ನ್ಯಾಯಾಲಯವದಲ್ಲಿ ದಾವೆ ಹೂಡಲು ನಿರ್ದಿಸಲಾಯಿತು.
ಆಹಾರ ಸಂರಕ್ಷಣಾ ಅಧಿಕಾರಿ ಸಂದೀಪು, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿಗಳಾದ ರಮೇಶ್, ಮಹೇಶ್ ಮತ್ತು ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ಹಾಜರಿದ್ದರು.