ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ :  ಕ.ಸಾ.ಪ ಜಿಲ್ಲಾಧ್ಯಕ್ಷ ಶಿವಸ್ವಾಮಿ
ಸಂಜೆವಾಣಿ ವಾರ್ತೆ
ಹಿರಿಯೂರು: ಜೂ. 22-  ದಿನೇ ದಿನೇ ಓದುಗರ ಸಂಖ್ಯೆ ಕಡಿಮೆ ಆಗುತ್ತಿದೆ ಇಂಥಹ ಸನ್ನಿವೇಶದಲ್ಲಿ ಒಂದು ಕಾದಂಬರಿಯನ್ನು ಬರೆದು, ಅದನ್ನು ಹೊರತರುವುದು ಸಾಹಸವೆಂದೇ ಹೇಳಬೇಕಾಗುತ್ತದೆ  ಎಂದು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಿವಸ್ವಾಮಿ ಹೇಳಿದರು.ಹಿರಿಯೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗು ಮಾನವ ಹಕ್ಕುಗಳ ಮಾಹಿತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ  ಖ್ಯಾತ ಕಾದಂಬರಿಕಾರ ಡಿ ಸಿ ಪಾಣಿ ಯವರು  ಬರೆದ ಪಾವನಿ  ಕಾದಂಬರಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.ತಾಲೂಕು ಕಸಾಪ ಅಧ್ಯಕ್ಷರಾದ ವಿ.ಎಂ. ನಾಗೇಶ್  ಮಾತನಾಡಿ ಬರದ ಹಿನ್ನೆಲೆಯಲ್ಲಿ ಹಾಗೂ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ತಡವಾಯಿತು ಎಂದು ವಿಷಾದ ವ್ಯಕ್ತಪಡಿಸಿದರು. ಹಾಗೂ ಡಿ.ಸಿ ಪಾಣಿಯವರ ಪಾವನಿ ಕಾದಂಬರಿ ಕುರಿತು ಮಾತನಾಡಿದರು.ಮಹಿಳಾ ಪ್ರಾಧಾನ್ಯತೆಯ ನನ್ನ ಕಾದಂಬರಿ ಪಾವನಿಯನ್ನು ಚಲನಚಿತ್ರವಾಗಿ ನಿರ್ಮಿಸುತ್ತಿದ್ದೇನೆ.  ಎಂದು ಕಾದಂಬರಿಕಾರ ಡಿ ಸಿ ಪಾಣಿ ಹೇಳಿದರು.ಹಿರಿಯ ಶಿಕ್ಷಣ ತಜ್ಞ  ಹೆಚ್ ಎನ್ ನರಸಿಂಹಯ್ಯನವರು   ಮಾತನಾಡಿ  ಹೋರಾಟಗಾರರಾದ ಡಿ ಸಿ ಪಾಣಿ ಉತ್ತಮ ಬರಹಗಾರರೂ ಹೌದು.  ಎಂದು ತಮ್ಮ ಕೆಲ ಅನುಭವಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.ಸಾಹಿತಿ  ತವನಿಧಿ ಓಂಕಾರಯ್ಯ, ನಾಯಕ ನಟ ಹೆಚ್ ಅಂಬರೀಷ್  ಮತ್ತಿತರರು ಮಾತನಾಡಿದರು.ಗೌರವ ಕಾರ್ಯದರ್ಶಿಗಳಾದ ಜಗದೀಶ್  ಮತ್ತು ಸಕ್ಕರ ನಾಗರಾಜ್  ಕಾರ್ಯಕ್ರಮ ನಿರೂಪಿಸಿ ವಂದಿಸಿದರು.