ಜಿಲ್ಲಾ ಉಸ್ತುವಾರಿ ಸಚಿವರಿಂದ “ಸ್ವಚ್ಛತಾ ವಾಹಿನಿ” ಮಹಿಳಾ ವಾಹನ ಚಾಲಕರಿಗೆ ಪ್ರಮಾಣ ಪತ್ರ ವಿತರಣೆ
ಕಲಬುರಗಿ:ಜೂ.22: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ನಿರ್ವಹಣೆ ಜವಾಬ್ದಾರಿ ಪಡೆದ ಮಹಿಳಾ ಒಕ್ಕೂಟದ ಸದಸ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಾಹನ ಚಾಲನಾ ತರಬೇತಿ ಪ್ರಮಾಣ ಪತ್ರ ಮತ್ತು ಡ್ರೈವಿಂಗ್ ಲೈಸೆನ್ಸ್ ವಿತರಣೆ ಮಾಡಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯತಿಯಿಂದ ಸಂಜೀವಿನಿ-ಎನ್.ಆರ್.ಎಲ್.ಎಂ ಯೋಜನೆಯಡಿ ಜಿಲ್ಲೆಯ 35 ಮಹಿಳಾ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಸಚಿವರು ಸಾಂಕೇತಿಕವಾಗಿ 10 ಜನರಿಗೆ ಪ್ರಮಾಣ ಪತ್ರ ವಿತರಿಸಿದರು.
ಗ್ರಾಮ ಪಂಚಾಯತಿಗಳು‌ ಎನ್.ಆರ್.ಎಲ್.ಎಂ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟಗಳ ಜೊತೆ ಘನತ್ಯಾಜ್ಯ ಕಾರ್ಯಚರಣೆ ಹಾಗೂ ನಿರ್ವಹಣೆಗಾಗಿ ಒಡಂಬಡಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಒಕ್ಕೂಟದ ಮಹಿಳಾ ಸದಸ್ಯರು ಗ್ರಾಮೀಣ ಭಾಗದಲ್ಲಿ ಕಸ ಸಂಗ್ರಹಣೆ ಮತ್ತು ಸ್ವಚ್ಛತಾ ವಾಹಿನಿಗಳನ್ನು ಚಲಾಯಿಸುವ ಜವಾಬ್ದಾರಿ ಪಡೆದಿದ್ದಾರೆ.
ಇಂದಿಲ್ಲಿ ಪ್ರಮಾಣ ಪತ್ರ ಪಡೆದ 35 ಜನ‌ ಮಹಿಳಾ ಸದಸ್ಯರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಮೀಣ‌ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ಮೂಲಕ 30 ದಿನಗಳ ವಸತಿ ಸಹಿತ ವಾಹನ ಚಾಲನೆ ತರಬೇತಿ ನೀಡಲಾಗಿದೆ. ಇದೂವರೆಗೆ ಇದೇ‌ ರೀತಿಯ 179 ಜನ ಮಹಿಳೆಯರು ಚಾಲನಾ ತರಬೇತಿ ಪಡೆದುಕೊಂಡಿದ್ದಾರೆ.
ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ,ಅಫಜಲಪುರ ಶಾಸಕ ಎಂ.ವೈ. ಪಾಟೀಲ, ವಿಧಾನ ಪರಿಷತ್ ಶಾಸಕರುಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ, ಡಿ.ಆರ್.ಡಿ.ಎ. ಯೋಜನಾ ನಿರ್ದೇಶಕ ಜಗದೇವಪ್ಪ ಇದ್ದರು.