ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ
ಸಂಜೆವಾಣಿ ವಾರ್ತೆ
ದಾವಣಗೆರೆ ಜೂ ೨೨;  ಯೋಗವು ಮನುಷ್ಯನ ಆರೋಗ್ಯದ ಗುಟ್ಟಾಗಿದೆ.ಯೋಗವು ವ್ಯಾಯಾಮ ಮಾತ್ರ ಅಲ್ಲ ಇದು ಮನುಷ್ಯನ ಜೀವನ ಶೈಲಿಯನ್ನೇ ಬದಲಾಯಿಸುವ ವಿಧಾನವಾಗಿದೆ. ಯೋಗದಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಶಿಸ್ತು, ಸಂಯಮ ರೂಢಿಸಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಮನಸ್ಸು ಮತ್ತು ದೇಹದ ಏಕತೆ ಸಾಧಿಸುವುದರೊಂದಿಗೆ ಆಲೋಚನೆ ಹಾಗೂ ಕ್ರಿಯೆಗಳಲ್ಲೂ ಬದಲಾವಣೆ  ಸಾಧ್ಯವಾಗುತ್ತದೆ. ಇದರಿಂದ ಇದೊಂದು ಆರೋಗ್ಯಕ್ಕೆ ಸಮಗ್ರ ವಿಧಾನವಾಗಿದ್ದು, ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ ಎಂದು ಕುರ್ಕಿ ಓದೋಗೌಡ್ರ ರೇವಣಸಿದ್ದಪ್ಪನವರು ತಿಳಿಸಿದರು.ಅವರು  ಕುರ್ಕಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹತ್ತನೇ ವಿಶ್ವ ಯೋಗ ದಿನಾಚರಣೆಯ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ದೊಂದಿದೆ ಯೋಗ ದಿನಾಚರಣೆಗೆ ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುರ್ಕಿ ಕೆ ಜಿ ವೇದಮೂರ್ತಿ ಗೌಡರು ಮಾತನಾಡುತ್ತಾ ಯೋಗವು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ ಮತ್ತು ಸಮತೋಲನವನ್ನು ಉಂಟುಮಾಡುವ ವಿಧಾನವಾಗಿದೆ. ಮಕ್ಕಳು ಯೋಗವನ್ನು ಇಂದಿಗೆ  ಸೀಮಿತಗೊಳಿಸದೆ ದಿನನಿತ್ಯ ತಮ್ಮ ಮನೆಗಳಲ್ಲಿ ಬೆಳಗಿನ ಅವಧಿಯಲ್ಲಿ ಮಾಡುವುದನ್ನು ರೂಡಿಸಿಕೊಳ್ಳಬೇಕು. ಇದರಿಂದ ತಮ್ಮ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೆ ವಿ  ಓಂಕಾರಪ್ಪ, ಸದಸ್ಯರಾದ ಕೆ ಜೆ ನಾಗರಾಜ್, ಮಂಜುನಾಥಯ್ಯ, ಕೆಎಸ್ ಚನ್ನಬಸಪ್ಪ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಕೆಬಿ ಮೀರಾ, ಶಿಕ್ಷಕರುಗಳಾದ  ಸಿಜಿ ಜಗದೀಶ್ ಕೂಲಂಬಿ, ಎಸ್ ಪಾರ್ವತಮ್ಮ, ಎ ಆರ್ ರಾಘವೇಂದ್ರ, ಎಂವಿ ಶಕುಂತಲಾ, ಹೆಚ್ ವಿರೂಪಾಕ್ಷಿ, ಪ್ರಕಾಶ್ ಎಸ್, ನಾಗರಾಜ್ ಎಮ್, ಸಣ್ಣ ಕೊಟ್ರಮ್ಮ ಭಾಗವಹಿಸಿದ್ದರು.ದೈಹಿಕ ಶಿಕ್ಷಣ ಶಿಕ್ಷಕರಾದ ಎ ಆರ್ ರಾಘವೇಂದ್ರ ಇವರು ಮಕ್ಕಳಿಗೆ ಯೋಗಾಸನವನ್ನು ಮಾಡಿಸಿದರು.
