ಸಿಲಿಂಡರ್ ಸ್ಫೋಟ ಹಿನ್ನೆಲೆ:ಹೋಟೆಲ್, ರೆಸ್ಟೋರೆಂಟ್ ನಲ್ಲಿ ಸುರಕ್ಷತಾ ಕ್ರಮಗಳ ಕುರಿತು ಅರಿವು ಮೂಡಿಸಿ:ಪ್ರಿಯಾಂಕ್ ಖರ್ಗೆ
ಕಲಬುರಗಿ:ಜೂ.22: ಇತ್ತೀಚೆಗೆ ಕಲಬುರಗಿಯ ಹೋಟೆಲ್ ವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಹಲವು ಕಾರ್ಮಿಕರು ಗಾಯಾಳುಗಳಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ
ಅಗ್ನಿಶಾಮಕ ಮುಂಜಾಗ್ರತಾ ತೆಗೆದುಕೊಳ್ಳಬಹುದಾದ ಸ್ಥಳದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಅಗ್ನಿಶಾಮಕ ಇಲಾಖೆಯಿಂದ ಜಾಗೃತಿ ಮೂಡಿಸಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆ ಸಿದ್ಧತೆ ಮತ್ತು ಪ್ರವಾಹ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕಲ್ಯಾಣ ಮಂಟಪ, ಹಾಸ್ಟೆಲ್, ಕೈಗಾರಿಕೆ, ಕಾರ್ಖಾನೆ ಹೀಗೆ ಅಗ್ನಿಶಾಮಕ ಮುಂಜಾಗ್ರತಾ ತೆಗೆದುಕೊಳ್ಳಬಹುದಾದ ಸ್ಥಳದಲ್ಲಿ ಸುರಕ್ಷಾ ಮುನ್ನೆಚ್ಚರಿಕೆ ವಹಿಸಲು ಪಾಂಪ್ಲೆಟ್ಸ್ ಹಂಚುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅಗ್ನಿಶಾಮಕ ಅಧಿಕಾರಿ ಗುರುರಾಜ ಅವರಿಗೆ ಸೂಚನೆ ನೀಡಿದರು.
ಇದನ್ನೆ ಆಧಾರವಾಗಿಟ್ಟುಕೊಂಡು ಹೋಟೆಲ್ ಮಾಲೀಕರಿಗೆ ಕಿರಿಕಿರಿ ಉಂಟು ಮಾಡಿ ಬೇರೆ ಸಮಸ್ಯೆಗೆ ದಾರಿಯಾಗಬಾರದು. ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಸುರಕ್ಷತಾ ಕ್ರಮ ತೆಗೆದುಕೊಳ್ಳಲು ಕಾಲಮಿತಿ ನಿಗದಿಪಡಿಸಬೇಕು. ನಿಗದಿತ ಅವಧಿಯಲ್ಲಿ ಸುರಕ್ಷಾ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಅಂತಹವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದರು.
ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ ರಸ್ತೆ ಬದಿಯಲ್ಲಿಯೂ ಸಿಲಿಂಡರ್ ಇಟ್ಟು ಲಘು ಉಪಹಾರ, ಫಾಸ್ಟ್ ಫುಡ್ ಮಾಡಿ ಮಾರಾಟ ಮಾಡುತ್ತಾರೆ. ಇದರ ಬಗ್ಗೆಯೂ ಜಿಲ್ಲೆಯ ಎಲ್ಲಾ ನಗರ-ಪಟ್ಟಣ ಪ್ರದೇಶದಲ್ಲಿ ಅಗ್ನಿಶಾಮಕ ಇಲಾಖೆ ಸರ್ವೆ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ‌ ಸಲ್ಲಿಸಬೇಕು. ಡಿ.ಸಿ. ಅವರು ಇದನ್ನು ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮ‌ ಕೈಗೊಳ್ಳಬೇಕು ಎಂದರು.