ಯೋಗ ಮಾಡಿ ರೋಗ ಓಡಿಸಿ: ಸಿದ್ರಾಮ ಪಾರಾ
ಬೀದರ:ಜೂ.22: ಪ್ರತಿನಿತ್ಯ ಯೋಗ ಮಾಡಿ ರೋಗಗಳನ್ನು ಓಡಿಸಿ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ ತಿಳಿಸಿದರು. ಕರ್ನಾಟಕ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ 10ನೇ ಯೋಗ ದಿನಕ್ಕೆ ಚಾಲನೆ ನೀಡಿ ಮಾತನಾಡಿದರು.
ಯೋಗ ಜೀವನದ ಭಾಗ ಎಂದು ಭಾವಿಸಿ ಮಕ್ಕಳು ಪ್ರತಿದಿನ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಬುದ್ಧಿ ಚುರುಕಾಗಲು ಯೋಗ ಪ್ರಾಣಾಯಮ ಮಾಡಬೇಕು. ಇದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ. ದೈಹಿಕ ಮತ್ತು ಮಾನಸಿಕ ಸಧೃಢವಾಗುತ್ತದೆ ಎಂದರು.
ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ ಮಾತನಾಡಿ ನಮ್ಮ ಕಾಲೇಜಿನಲ್ಲಿ ಅತ್ಯಂತ ಹರ್ಷದಿಂದ ಯೋಗ ದಿನ ಆಚರಣೆ ಮಾಡಿದ್ದು ಖುಷಿ ತಂದಿದೆ. ಪ್ರತೀ ವರ್ಷ ಪಠ್ಯದ ಜೊತೆಗೆ ಇಂತಹ ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ. ನಮ್ಮ ಸಹಕಾರ ನಿರಂತರವಾಗಿದೆ ಎಂದರು.
ವೇದಿಕೆ ಮೇಲೆ ಕ.ರಾ.ಶಿ ಸಂಸ್ಥೆಯ ನ್ಯಾಸದ ಕಾರ್ಯದರ್ಶಿ ಮಡಿವಾಳಪ್ಪ ಗಂಗಶೆಟ್ಟಿ, ಆಡಳಿತ ಮಂಡಳಿ ನಿರ್ದೇಶಕರಾದ ರಾಜಶೇಖರ ತಾಂಡೂರ, ವೀರಭದ್ರಪ್ಪ ಬುಯ್ಯಾ, ರವಿ ಹಾಲಹಳ್ಳಿ, ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಂಗರಗಿ ಉಪಸ್ಥಿತರಿದ್ದರು.
ಖ್ಯಾತ ಯೋಗಗುರು ಯೋಗೇಂದ್ರ ಯದಲಾಪುರೆ ಯೋಗ ತರಬೇತಿಯನ್ನು ನೀಡಿದರು. ಯೋಗ ಧ್ಯಾನ ಮತ್ತು ಪ್ರಾಣಾಯಾಮದ ಮಹತ್ವ ಕುರಿತು ಮಕ್ಕಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಆಯೋಜಕರಾದ ದೈಹಿಕ ನಿರ್ದೇಶಕ ಡಾ. ಮಾದಯ್ಯ ಸ್ವಾಮಿ ಹಾಗೂ ಎನ್‍ಎಸ್‍ಎಸ್ ಅಧಿಕಾರಿ ಸೋಮನಾಥ ಬಿರಾದಾರ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಯೋಗ ಮಾಡಿ ರಿಲ್ಯಾಕ್ಸ್ ಆದರು.