ಕಲಬುರಗಿ ಹೆಲ್ತ್ ಹಬ್ ಮಾಡೋದು ನಮ್ಮ ಕನಸು:ಡಾ.ಶರಣಪ್ರಕಾಶ್
ಕಲಬುರಗಿ: ಜೂ.22:ಕಲಬುರಗಿ ನಗರವನ್ನು ಆದಷ್ಟು ಶೀಘ್ರ ಹೆಲ್ತ್ ಹಬ್ ಮಾಡುವ ಕನಸು ತಮ್ಮದಾಗಿದೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆವರಣದಲ್ಲಿ ರೂ 282 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 50 ಹಾಸಿಗೆಗಳ ತೀವ್ರ ನಿಗಾ ಘಟಕ ಹಾಗೂ ರೂ 28 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 30 ಹಾಸಿಗೆಗಳ ಸುಟ್ಟ ಗಾಯಗಳ ಘಟಕ ಆಸ್ಪತ್ರೆಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಮುಂದಿನ ಮೂರು ತಿಂಗಳಲ್ಲಿ ಕಲಬುರಗಿ ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು. ಜೊತೆಗೆ ಸೆಪ್ಟೆಂಬರ್ ತಿಂಗಳಲ್ಲಿ ಜಯದೇವ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ಮಾಡಲಾಗುವುದು ಎಂದರು.
ಕಲಬುರಗಿ ನಗರವನ್ನು ಹೆಲ್ತ್ ಹಬ್ ಮಾಡುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಭಿಲಾಷೆಯಂತೆ ಇಂದು ಕಲಬುರಗಿಯಲ್ಲಿ ಇಎಸ್ ಐಸಿ, ಮೆಡಿಕಲ್ ಕಾಲೇಜು, ಜಯದೇವ ಹೃದ್ರೋಗ ಸಂಶೋಧನಾ ಕೇಂದ್ರ, ಟ್ರಾಮಾ ಸೆಂಟರ್, ಕಿದ್ವಾಯಿ ಕ್ಯಾನ್ಸರ್ ಆರೋಗ್ಯ ಸಂಸ್ಥೆಗಳು ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಪೂರಕವಾಗಿ ತೀವ್ರ ನಿಗಾ ಘಟಕ ಹಾಗೂ ಸುಟ್ಟ ಗಾಯಗಳ ಆಸ್ಪತ್ರೆಗೆ ಅಡಿಗಲ್ಲು ನೆರವೇರಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಂದಿನ ಮೂರು ತಿಂಗಳೊಳಗೆ ರೂ. 92 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಸಾಮಥ್ರ್ಯದ ತಾಯಿ ಮತ್ತು ಮಗು ಆಸ್ಪತ್ರೆ, ರೂ 75 ಕೋಟಿ ವೆಚ್ಚದಲ್ಲಿ 150 ಹಾಸಿಗೆ ಸಾಮಥ್ರ್ಯದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ರೂ 90 ಕೋಟಿ ವೆಚ್ಚದಲ್ಲಿ ಮಕ್ಕಳಿಗಾಗಿ ಇಂದಿರಾಗಾಂಧಿ ಇನ್ಸ್ಟಿಟ್ಯೂಟ್ ಆಫ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶಾಖೆ ಸ್ಥಾಪನೆಗೆ ಅಡಿಗಲ್ಲು ನೆರವೇರಿಸಲಾಗುವುದು. ಜೊತೆಗೆ ಮುಂದಿನ ಮೂರು ವರ್ಷದ ಒಳಗಾಗಿ ನಿಮ್ಹಾನ್ಸ್ ಆಸ್ಪತ್ರೆಯನ್ನು ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಡಾ ಪಾಟೀಲ್ ಭರವಸೆ ನೀಡಿದರು.
ಕಲಬುರಗಿ ನಗರದಲ್ಲಿ ರೂ. 20 ಕೋಟಿ ವೆಚ್ಚದಲ್ಲಿ ಬಾಲಕರ ಐಟಿಐ ಕಾಲೇಜು, ರೂ. 50 ಕೋಟಿ ವೆಚ್ಚದಲ್ಲಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ
ಹಾಗೂ ಸೆಂಟರ್ ಫಾರ್ ಎಕ್ಸಲೆನ್ಸ್ ಸ್ಥಾಪನೆ ಮಾಡಲಾಗುವುದು ಎಂದು ಸಹ ಸಚಿವ ಡಾ.ಪಾಟೀಲ್ ಹೇಳಿದರು.
ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಬೇರೆ ರಾಜ್ಯಗಳಿಗೆ ಹೋಲಿಸಿದರೆ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಸೇರಿದಂತೆ ಶೈಕ್ಷಣಿಕ ಸಲಕರಣೆಗಳನ್ನು ನಮ್ಮ ರಾಜ್ಯದಲ್ಲಿ ಹೆಚ್ಚು ಒದಗಿಸಲಾಗುತ್ತಿದೆ ಎಂದರು.
ತಾಂತ್ರಿಕತೆ ಹಾಗೂ ಕೌಶಲ್ಯ ಅಭಿವೃದ್ದಿ ಹೊಂದಿದ ಮಾನವ ಸಂಪನ್ಮೂಲ ಅಭಿವೃದ್ದಿ ಪಡಿಸುವಲ್ಲಿ ರಾಜ್ಯ ಯಾವಾಗಲೂ ಮುಂದೆ ಇದ್ದು ವಿಶ್ವದಾದ್ಯಂತ ನಮ್ಮ ರಾಜ್ಯದ ಮಾನವ ಸಂಪನ್ಮೂಲಕ್ಕೆ ಭಾರೀ ಬೇಡಿಕೆ ಇದೆ. ಈಗ ಕಲಬುರಗಿ ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಿದ್ದು ಪ್ರಾದೇಶಿಕ ಹೆಲ್ತ್ ಹಬ್ ಆಗಿ ಪರಿವರ್ತನೆ ಹೊಂದಿದೆ. ಈ ಮೊದಲು ಇಲ್ಲಿನ ರೋಗಿಗಳು ಸೋಲಾಪುರಕ್ಕೆ ಹೋಗುತ್ತಿದ್ದರು. ಈಗ ಎಲ್ಲ ಸೌಲಭ್ಯಗಳನ್ನು ಇಲ್ಲಿಯೇ ಒದಗಿಸಲಾಗಿದ್ದು. ಇದಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಕೂಡ ಒದಗಿಸಲಾಗಿದೆ ಎಂದರು.
ನಮ್ಮ ಭಾಗದ ಶೈಕ್ಷಣಿಕ ಅಭಿವೃದ್ದಿಯ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು 371 (ಜೆ) ಜಾರಿಗೊಳಿಸಿದ್ದಾರೆ. ಇಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಜೊತೆಗೆ ಅಭಿವೃದ್ದಿಗಾಗಿ ವಿಶೇಷ ಅನುದಾನ ಮೀಸಲಾತಿ ಸೌಲಭ್ಯವನ್ನೂ ಸೇರಿಸಲಾಗಿದೆ. ಈ ತರಹದ ಸೌಲಭ್ಯ ಯಾವ ರಾಜ್ಯಗಳಲ್ಲೂ ಇಲ್ಲ. ಈ ಸೌಲಭ್ಯ ಪಡೆದುಕೊಂಡಿದ್ದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ವರ್ಷ 999 ವೈದ್ಯಕೀಯ, 1500 ದಂತ ವೈದ್ಯಕೀಯ ಸೀಟು ಸಿಕ್ಕಿವೆ. ಇದಕ್ಕೆ ಖರ್ಗೆಯವರ ಪರಿಶ್ರಮ ಹಾಗೂ ಅಭಿವೃದ್ಧಿ ಪರ ಚಿಂತನೆ ಕಾರಣವಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಇತರೆ ಶೈಕ್ಷಣಿಕ ಸಲಕರಣೆಗಳನ್ನು ವಿತರಿಸಲಾಯಿತು.
ವೇದಿಕೆಯ ಮೇಲೆ ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್, ಶಾಸಕರಾದ ಎಂ.ವೈ.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ದೇವೆಂದ್ರಪ್ಪ ಮರತೂರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂಖಾನ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕಮೀಷನರ್ ಆರ್. ಚೇತನ್, ಸಿಇಓ ಭವರ್ ಸಿಂಗ್ ಮೀನಾ ಸೇರಿದಂತೆ ಇತರರಿದ್ದರು.