ಆಲಮೇಲ ಗುರು ಸಂಸ್ಥಾನ ಹಿರೇಮಠದಲ್ಲಿ ಸಂಗೀತೋತ್ಸವ
ಕಲಬುರಗಿ,ಜೂ.22-ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಶ್ರೀ ಗುರು ಸಂಸ್ಥಾನ ಹಿರೇಮಠದಲ್ಲಿ ಪರಮತಪಸ್ವಿ ಲಿಂ.ಸಿದ್ದಲಿಂಗ ಶಿವಾಚಾರ್ಯರ 67ನೇ ಪುಣ್ಯಸ್ಮರಣೋತ್ಸವ ಹಾಗೂ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳವರ 80ನೇ ಮತ್ತು ಸಂಗೀತ ಜಗದ್ಗುರು ಗಾನಯೋಗಿ ಶಿವಯೋಗಿ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಆಲಮೇಲ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರ ಸಾನಿಧ್ಯದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು. ಸಮ್ಮುಖವನ್ನು ತಡವಲಗಾ ಶ್ರೀಗಳು, ಯಂಕಂಚಿಯ ಶ್ರೀಗಳು, ಬಳವಾಟ ಶ್ರೀಗಳು, ಅಗರಖೇಡ ಶ್ರೀಗಳು, ಅರ್ಜುಣಗಿ ಶ್ರೀಗಳು ಕುಮಸಗಿ ಶ್ರೀಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು ಸಿಂದಗಿ ಶಾಸಕರ ಧರ್ಮಪತ್ನಿ ನಾಗರತ್ನಾ ಅಶೋಕ ಮನಗೂಳಿ ವಹಿಸಿದ್ದರು. ಕಲಾವಿದರಾದ ಪಂ.ಮಹೇಶ ಕುಮಾರ ಹೇರೂರು, ರೇಣುಕ ಗವಾಯಿಗಳು ಕೇರುಟಗಿ, ಶಿವರುದ್ರಯ್ಯ ಗೌಡಗಾಂವ, ಯಶವಂತ ಸಿಂದಗಿ, ವೇತಾಳ ಜೋಶಿ ಆಲಮೇಲ, ವೀರುಪಾಕ್ಷಯ್ಯ ಗೌಡಗಾಂವ, ಅಪ್ಪು ಉಪ್ಪಿನ ಅವರ ಸಂಗೀತಕ್ಕೆ ಶಾಂತಕುಮಾರ ಜೇರಟಗಿ, ರಾಜಶೇಖರ ಕಟ್ಟಿಸಂಗಾವಿ, ಸದಾಶಿವ ಬಿರಾದಾರ ತಬಲಾ ಸಾಥ್ ನೀಡಿದರು.
ಮಡಿವಾಳಯ್ಯ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ ಮಠಪತಿ ಸ್ವಾಗತಿಸಿದರು. ಪ್ರವಚನಕಾರರಾದ ಬಂಡಯ್ಯ ಶಾಸ್ತ್ರಿಗಳು ಸುಂಟನೂರ ನಿರೂಪಿಸಿದರು. ಮೇಣಸಗಿ, ಬೊಮ್ಮನಹಳ್ಳಿ ಹಾಗೂ ಆಲಮೇಲ ಶ್ರೀಮಠದ ಸದ್ಭಕ್ತರು, ಸ್ಥಳೀಯ ಕಾಲಾವಿದರು ಸಂಗೀತ ಅಭಿಮಾನಿಗಳು ಪಾಲ್ಗೊಂಡಿದ್ದರು.