ಹೋಟೆಲ್‍ನಲ್ಲಿ ಸಿಲಿಂಡರ್ ಸ್ಫೋಟ: ಸಂತ್ರಸ್ತ ಕುಟುಂಬಗಳಿಗೆ ಶಾಸಕ ಅಲ್ಲಮಪ್ರಭು ಸಾಂತ್ವನ
ಕಲಬುರಗಿ,ಜೂ.22-ನಗರದ ಶರಣಬಸವೇಶ್ವರ ಕೆರೆ ಪಕ್ಕದ ಸಪ್ತಗಿರಿ ಹೋಟೆಲ್‍ನಲ್ಲಿ ಸಂಭವಿಸಿರುವ ಸಿಲಿಂಡರ್ ಸ್ಫೋಟ ಹಾಗೂ ಸಾವು ನೋವಿನ ಘಟನೆಯ ಬಗ್ಗೆ ತೀವ್ರ ಆತಂಕ ಹೊರಹಾಕಿರುವ ಶಾಸಕÀ ಅಲ್ಲಂಪ್ರಭು ಪಾಟೀಲರು ಘಟನೆಯಲ್ಲಿ ಸಾವನ್ನಪ್ಪಿರುವ ಕಾರ್ಮಿಕ ಕುಟುಂಬ ಹಾಗೂ ಗಂಭೀರ ಗಾಯಗೊಂಡಿರುವ ಕುಟುಂಬಗಳ ಸದಸ್ಯರೊದಿಗೆ ದೂರವಾಣಿಯಲ್ಲಿ ಮಾತನಾಡಿ ಸಾಂತ್ವನ ಹೇಳಿದ್ದಾರೆ.
ಹೋಟಲ್ ಮಾಲೀಕರಾದ ಶರಣಬಸಪ್ಪ ಜೊತೆಗೂ ಮಾತನಾಡಿರುವ ಅಲ್ಲಂಪ್ರಭು ಪಾಟೀಲರು ಘಟನೆಯ ವಿವರಗಳನ್ನು ಪಡೆದಿದ್ದಾರೆ. ಆಗಿರುವ ಅನಾಹುತಕ್ಕೆ ವಿಷಾದಿಸಿದ್ದಾರೆ. ಸುಟ್ಟ ಗಾಯಗಳನ್ನು ಅನುಭವಿಸಿರುವ 10 ಕಾರ್ಮಿಕರಲ್ಲಿ ಸಾವನ್ನಪ್ಪಿರುವ ರೋಜಾ (ಬಿ) ಬಡಾವಣೆಯ ನಿವಾಸಿ ಮಲ್ಲಿಕಾರ್ಜುನ ಅವರ ಕುಟುಂಬದವರಿಗೂ ಶಾಸಕರು ಮಾತನಾಡಿ ಸಾಂತ್ವನ ಹೇಳಿದ್ದಾರೆ.
ಕಲಬುರಗಿಯಲ್ಲಿ ಹೋಟಲ್ ಉದ್ಯಮದಲ್ಲಿ ಇಂತಹ ಅನಾಹುತಗಳಾಗಿರಲಿಲ್ಲ. ಘಟನೆಯಲ್ಲಿ ಸುಟ್ಟ ಗಾಯಗಳನ್ನು ಅನುಭವಿಸಿರುವ ಎಲ್ಲಾ ಕಾರ್ಮಿಕರಿಗೆ ತಾವು ಸಿಎಂ ಪರಿಹಾರ ನಿಧಿಯಿಂದ ತಕ್ಕ ಪರಿಹಾರ ಒದಗಿಸುವ ದಿಶೆಯಲ್ಲಿ ಪ್ರಯತ್ನಿಸೋದಾಗಿಯೂ ಅಲ್ಲಂಪ್ರಭು ಪಾಟೀಲರು ಹೇಳಿದ್ದಾರೆ.
ಸಿಲಿಂಡರ್ ಸ್ಫೋಟ: ಓರ್ವ ಕಾರ್ಮಿಕ ಸಾವು
ಕಲಬುರಗಿ,ಜೂ.22-ನಗರದ ಶರಣಬಸವೇಶ್ವರ ಕೆರೆ ಪಕ್ಕದ ಸಪ್ತಗಿರಿ ಆರೇಂಜ್ ಹೋಟೆಲ್‍ನಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಸಿಲಿಂಡರ್ ಸ್ಪೋಟ ಘಟನೆಯಲ್ಲಿ ಗಾಯಗೊಂಡಿದ್ದ 10 ಜನ ಕಾರ್ಮಿಕರ ಪೈಕಿ ಒಬ್ಬ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ನಗರದ ರೋಜಾ (ಬಿ) ಬಡಾವಣೆಯ ಮಲ್ಲಿಕಾರ್ಜುನ ಮೃತಪಟ್ಟ ಕಾರ್ಮಿಕ. ಉಳಿದ 9 ಜನ ಕಾರ್ಮಿಕರಲ್ಲಿ ಸಣ್ಣಪುಟ್ಟ ಗಾಯಗಳಾದವರನ್ನು ನಗರದ ಜಿಮ್ಸ್ ಆಸ್ಪತ್ರೆಗೆ, ಗಂಭೀರ ಗಾಯಗಳಾದವರನ್ನು ಬೆಂಗಳೂರು ಮತ್ತು ಮಹಾರಾಷ್ಟ್ರದ ಮಿರಾಜ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯ ಕುರಿತಂತೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.