ಎಲ್ ಆಯಿಂಡ್ ಟಿ ವಿರುದ್ಧ ಶೀಘ್ರ ಅಗತ್ಯ ಕ್ರಮ: ಸಚಿವ ಪ್ರಿಯಾಂಕ್ ಸುಳಿವು
ಕಲಬುರಗಿ:ಜೂ.22: ಎಲ್ ಆಯಿಂಡ್ ಟಿ ಸಂಸ್ಥೆ ಕಲಬುರಗಿ ನಗರದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸ ಬಗ್ಗೆ ವ್ಯಾಪಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಶೀಘ್ರ ರಾಜ್ಯ ವಿಧಾನಸಭೆಯಲ್ಲಿ ತುರ್ತು ಕ್ರಮ ಜರುಗಿಸಲಾಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಮುಖ್ಯಮಂತ್ರಿ ಸಭೆ ನಡೆಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿದ್ದು ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಮಗ್ರ ಚರ್ಚೆ ಕೈಗೊಂಡು ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದರು.
ಕಲಬುರಗಿ ನಗರದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಗುತ್ತಿಗೆ ತೆಗೆದುಕೊಂಡಿರುವ
ಎಲ್ ಆಯಿಂಡ್ ಟಿ ಕಂಪನಿ ಹಲವಾರು ಕಡೆ ಭೂಮಿ ಅಗೆದು ವೈಜ್ಞಾನಿಕವಾಗಿ ಮುಚ್ಚದೆ ಬಿಟ್ಟಿರುವ ಬಗ್ಗೆ ಪತ್ರಕರ್ತರು ಸಚಿವರ ಗಮನಕ್ಕೆ ತಂದಾಗ ಉತ್ತರಿಸಿದ ಸಚಿವರು, ಈಗಾಗಲೇ ಜಿಲ್ಲಾ ಮಟ್ಟದ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಆದರೂ ಕೆಲವು ಕಡೆ ಲೋಪಗಳು ಕಂಡು ಬಂದಿರುವುದರಿಂದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ದೆಹಲಿಯಿಂದ ಕರೆಸಿ ಚರ್ಚೆ ನಡೆಸಲಾಗಿದೆ ಎಂದರು.
ಕಲಬುರಗಿ ನಗರದ ಕೆಲವು ಕಡೆ ರಾಡಿ ಮಿಶ್ರಿತ ನೀರು ಸರಬರಾಜು ಆಗಿರುವ ಹಿನ್ನೆಲೆಯಲ್ಲಿ ಉತ್ತರಿಸಿದ ಸಚಿವರು, ಮುಂಗಾರು ಮಳೆ ಸ್ವಲ್ಪ ಜಾಸ್ತಿ ಬಂದಿದ್ದರಿಂದ ರಾಡಿ ನೀರು ಸರಬರಾಜು ಆಗಿದೆ. ಹಾಗಾಗಿ, ಆ ನೀರು ಮನೆಗಳಿಗೆ ಸರಬರಾಜಾಗಿ ಕಲಷಿತಗೊಂಡು ಮತ್ತಷ್ಟು ಹಾನಿಯಾಗಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಮಹಾನಗರ ಪಾಲಿಕೆ ನೀರು ಬಳಸದಂತೆ ನಾಗರಿಕರಿಗೆ ಮನವಿ ಮಾಡಿತ್ತು ಎಂದು ಸ್ಪಷ್ಟಪಡಿಸಿದರು.
ಸಿಎಸ್ ಆರ್ ಅಡಿಯಲ್ಲಿ ರೂ 2,000 ಕೋಟಿ ಅನುದಾನ ಸಂಗ್ರಹಿಸಿ ಬೆಂಗಳೂರು ಹೊರತುಪಡಿಸಿ ಗ್ರಾಮೀಣ ಮಟ್ಟದ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಯೋಚನೆಯಿದೆ. ಈ ಉದ್ದೇಶಕ್ಕಾಗಿ ಅನಿವಾಸಿ ಭಾರತೀಯರು ಸೇರಿದಂತೆ ಇತರೆ ದಾನಿಗಳಿಂದ ಅನುದಾನ ಸಂಗ್ರಹಿಸಲಾಗುವುದು ಎಂದು ಸಚಿವರು ಹೇಳಿದರು.