ಜು.13ರಂದು ರಾಷ್ಟ್ರೀಯ ಲೋಕ ಅದಾಲತ್
ಕಲಬುರಗಿ: ಜೂ.22:ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಪ್ರಕಾರ ಜುಲೈ 13ರಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ನಾಗಶ್ರೀ ತಿಳಿಸಿದರು.
ಜಿಲ್ಲಾ ನ್ಯಾಯಾಲಯದ ಎಡಿಆರ್ ಕಟ್ಟಡದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲಾ ನ್ಯಾಯಾಲಯ ಹಾಗೂ ಎಲ್ಲ ತಾಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವುದು ಎಂದರು.
ರಾಜಿ ಸಂಧಾನದ ಮೂಲಕ ಬಹುದಿನಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವುದರಿಂದ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಇದರಿಂದ ಅನಗತ್ಯವಾಗಿ ಆರ್ಥಿಕ ಹೊರೆ ಎದುರಿಸುವುದು ಸಹ ತಪ್ಪುತ್ತದೆ ಎಂದು ನ್ಯಾ.ನಾಗಶ್ರೀ ಕಿವಿಮಾತು ಹೇಳಿದರು.
ಕಕ್ಷಿದಾರರು ತಮ್ಮ ವಕೀಲರ ಮೂಲಕ ಅಥವಾ ಸ್ವತಃ ಕಕ್ಷಿದಾರರು ತಾವೇ ಖುದ್ದಾಗಿ ಪ್ರಕರಣದ ಕುರಿತು ವಾದಿಸಲು ಅವಕಾಶವಿರುತ್ತದೆ. ಜೊತೆಗೆ, ಲೋಕ ಅದಾಲತ್ ಮೂಲಕ ಪ್ರಕರಣ ಇತ್ಯರ್ಥಗೊಂಡರೆ ಈ ಹಿಂದೆ ನ್ಯಾಯಾಲಯಕ್ಕೆ ಭರಿಸಿದ ಎಲ್ಲ ಶುಲ್ಕ ಹಿಂದಿರುಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೋರ್ಟ್ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿ ಅಥವಾ ಆಯಾ ತಾಲೂಕು ಕಾನೂನು ಸೇವಾ ಸಮಿತಿ ಅಥವಾ
ತಾಲೂಕು ಕೋರ್ಟ್ ಆವರಣದಲ್ಲಿರುವ ಕಾಯಂ ಜನತಾ ನ್ಯಾಯಾಲಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ನ್ಯಾಯಾಧೀಶರಾದ ನಾಗಶ್ರೀ ನುಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಉಪಸ್ಥಿತರಿದ್ದರು.