ಆರೋಗ್ಯಕರ ಜೀವನಕ್ಕೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ದಿವ್ಯ ಔಷಧಿಯಾಗಿದೆ : ಶಾಸಕ ಲಕ್ಷ್ಮಣ ಸವದಿ
ಅಥಣಿ : ಜೂ.22:ಯೋಗ ಎಂದರೆ ಇದೊಂದು ಧರ್ಮವಲ್ಲ, ಆರೋಗ್ಯವಂತ ಜೀವನದ ಪದ್ಧತಿಯಾಗಿದೆ. ಆರೋಗ್ಯಕರ ಜೀವನಕ್ಕೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ದಿವ್ಯ ಔಷಧಿಗಳಾಗಿವೆ. ಪ್ರತಿಯೊಬ್ಬರು ಪ್ರತಿ ದಿನ ಯೋಗವನ್ನು ರೂಡಿಸಿಕೊಂಡಾಗ ಆರೋಗ್ಯವಂತ ಸಮಾಜವನ್ನು ಕಟ್ಟಲು ಸಾಧ್ಯವಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆಯ ಮಹಾವಿದ್ಯಾಲಯದ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ತಾಲೂಕ ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗ ರೋಗ ಮುಕ್ತ ಸಮಾಜಕ್ಕೆ ಸಹಕಾರಿಯಾಗಿದೆ. ಪುರಾತನ ಕಾಲದಲ್ಲಿ ನಮ್ಮ ಋಷಿಮುನಿಗಳು ಕೂಡ ಯೋಗ ಧ್ಯಾನ ಮತ್ತು ಪ್ರಾಣಾಯಾಮಗಳನ್ನ ರೂಡಿಸಿಕೊಂಡು ನೂರು ವರ್ಷಗಳನ್ನು ಆರೋಗ್ಯವಂತರಾಗಿ ಕಳೆಯುತ್ತಿದ್ದರು. ಆದರೆ ಇಂದಿನ ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯಿಂದ ಬದುಕು ವಿಷಕಾರಿಯಾಗುತ್ತಿದೆ. ಆದ್ದರಿಂದ ಪತಂಜಲಿ ಯೋಗಪೀಠದ ರಾಮದೇವ್ ಬಾಬಾ ಅವರಂತಹ ಅನೇಕ ಯೋಗ ಗುರುಗಳು ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ದೇಶದ ಜನರಿಗೆ ತಮ್ಮ ಮಾರ್ಗದರ್ಶನ ನೀಡುತ್ತಿದ್ದಾರೆ. ಇದಲ್ಲದೆ ಆರೋಗ್ಯವಂತ ಮತ್ತು ಸದೃಢ ಭಾರತವನ್ನು ನಿರ್ಮಿಸಬೇಕು ಎಂಬ ಉದ್ದೇಶದಿಂದ ಕಳೆದ 9 ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಯೋಗವನ್ನು ವಿಶ್ವ ವ್ಯಾಪಿಸಿ ಪ್ರತಿ ವರ್ಷ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಜಾರಿಗೆ ಬರುವಂತೆ ಮಾಡಲಾಗಿದೆ. ಯೋಗ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನ ನಮ್ಮ ಬದುಕಿನ ಒಂದು ಭಾಗವಾಗಬೇಕು ಎಂದರು.
ಕಲುಷಿತ ಆಹಾರ ಪದ್ಧತಿ : ಹಿಂದಿನ ಆಹಾರ ಪದ್ಧತಿಗೂ ಇಂದಿನ ಆಹಾರ ಪದ್ಧತಿಗೆ ಬಹಳಷ್ಟು ವ್ಯತ್ಯಾಸವಿದೆ. ಇಂದಿನ ಆಹಾರ ಎಲ್ಲಾ ಕಲುಷಿತವಾಗಿದ್ದು, ಹೈಬ್ರಿಡ್ ಬೀಜಗಳು ಇರುವುದರಿಂದ ಅತಿಯಾದ ರಸಗೊಬ್ಬರ ಮತ್ತು ಕ್ರಿಮಿನಾಶಕಗಳಿಂದ ಕೃಷಿ ಉತ್ಪನ್ನಗಳನ್ನು ಬೆಳೆದು ನಾವು ಆಹಾರದೊಂದಿಗೆ ವಿಷವನ್ನು ಸೇವಿಸುತ್ತಿದ್ದೇವೆ. ಇದರಿಂದ ರೋಗ ರುಜಿನಗಳು ಹೆಚ್ಚಾಗಿದ್ದು, ಆದ್ದರಿಂದ ಇಂದಿನ ಯುವ ಜನಾಂಗ ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ನಮ್ಮ ಆಹಾರ ಪದ್ಧತಿ ಶುದ್ಧವಾಗಿರಬೇಕು. ನಮ್ಮ ರೈತರು ಸಾವಯುವ ಕೃಷಿ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ನಮ್ಮ ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಪ್ರತಿದಿನ ಯೋಗವನ್ನು ಮೈಗೂಡಿಸಿಕೊಂಡು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢತೆ ಹೊಂದಲು ಕರೆ ನೀಡಿದರು.
ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಾಂತಿನಾಥ ಬಳೋಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತಂಜಲಿ ಯೋಗ ಸಮಿತಿಯ ತಾಲೂಕ ಅಧ್ಯಕ್ಷ ಎಸ್ ಕೆ ಹೊಳೆಪ್ಪನವರು ಯೋಗ ಪ್ರಾತ್ಯಕ್ಷಿತೆಯನ್ನು ನಡೆಸಿ ಕೊಟ್ಟರು. ನಂತರ ಇತ್ತೀಚಿಗೆ ಶಾಲಾ ಮಕ್ಕಳಿಗಾಗಿ ನಡೆಸಿದ ಯೋಗ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ತಹಸೀಲ್ದಾರ ವಾಣಿ ಯು. ತಾ. ಪo.ಅಧಿಕಾರಿ ಶಿವಾನಂದ ಕಲ್ಲಾಪುರ, ಅಭಿಯಂತರ ವೀರಣ್ಣ ವಾಲಿ, ರವೀಂದ್ರ ಮುರಗಾಲಿ, ನೌಕರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ವಿಲಾಸ ಕಾಂಬಳೆ, ಅಮ್ಮಣ್ಣ ಕುರುಂದವಾಡ. ರಾಮನಗೌಡ ಪಾಟೀಲ (ಶಿವನೂರ) ಅರುಣ ಯಲಗುದ್ರಿ. ಸೇರಿದಂತೆ ಇನ್ನಿತರ ಅಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು, ವಿವಿಧ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಡಾ. ಆರ್ ಎಸ್ ದೊಡ್ಡ ನಿಂಗಪ್ಪಗೋಳ ಸ್ವಾಗತಿಸಿ ವಂದಿಸಿದರು.