ಯೋಗ ಆರೋಗ್ಯಕ್ಕೆ ಯೋಗ್ಯ: ಬಸವರಾಜ ಅನಂತಪುರ
ಚಿಕ್ಕಪಡಸಲಗಿ ( ತಾ: ಜಮಖಂಡಿ) : ಜೂ.22:ಯೋಗ ಪ್ರೇಮಭಾವ ಸಕಲರಲ್ಲೂ ಮೂಡಿಬರಲಿ. ಯೋಗ ನಮ್ಮ ಆರೋಗ್ಯಕರ ಬದುಕಿಗೆ ಯೋಗ್ಯವಾಗಿದೆ ಎಂದು ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ ಹೇಳಿದರು.
ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯಡಿಯಲ್ಲಿ ಚಿಕ್ಕಪಡಸಲಗಿಯಲ್ಲಿ ನಡೆಯುತ್ತಿರುವ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ, ಕನ್ನಡ, ಆಂಗ್ಲ ಪ್ರಾಥಮಿಕ ಶಾಲೆ, ಐಐಟಿ ಕಾಲೇಜುಗಳ ಅಂಗಳದಲ್ಲಿ ಶುಕ್ರವಾರ ನಡೆದ ಹತ್ತನೆ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗಾಸಕ್ತಿ ಭಾವದ ಪ್ರತಿಬಿಂಬ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೈಳೇಸಬೇಕು. ಇಂದಿನ ಯುವಜನಾಂಗ ಸೇರಿದಂತೆ ಎಲ್ಲ ವಯೋಮಾನದವರ ಮೈಮನದಲ್ಲಿ ಅದು ಅರಳಬೇಕು. ಯೋಗ ಜನಮನದ ಅಂತರಂಗದ ಶುದ್ಧೀಕರಣಕ್ಕೆ ಸಹಕಾರಿಯಾಗಿದೆ ಎಂದರು.
ಸಂಕೀರ್ಣಮಯ ಬದುಕಿನಲ್ಲಿಂದು ಜನ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಲ್ಲಿದ್ದಾರೆ. ಇದರಿಂದ ಹೊರಬರಲು ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಬೇಕು. ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ದೈಹಿಕ ಕಸರತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಆರೋಗ್ಯವಂತರಾಗಿ ಮಿನುಗಬೇಕು. ಬೆಳಗಿನ ಜಾವದಲ್ಲಿ ಯೋಗಾಭ್ಯಾಸಕ್ಕೆ ನಾವೆಲ್ಲರೂ ವಾಲಿದರೆ ಮನಸ್ಸು ಪ್ರಫುಲವಾಗಿ ಘಮಘಮಿಸುತ್ತದೆ. ಮನಸ್ಸು ಪ್ರಸನ್ನತೆಯಿಂದಿರುತ್ತದೆ. ಮನಶಾಂತಿ,ನೆಮ್ಮದಿ ಜೊತೆಗೆ ಉತ್ತಮ ಆರೋಗ್ಯ ಕವಚ ಲಭಿಸುತ್ತದೆ. ದೇಹವನ್ನು ನಮ್ಮ ಮನಸ್ಥಿತಿ, ವಾತಾವರಣಕ್ಕೆ ತಕ್ಕಂತೆ ಅಳವಾಗಿ,ಕ್ರಮಬದ್ಧವಾಗಿ ಯೋಗ ಕಸರತ್ತಿನಲ್ಲಿ ದಂಡಿಸಿದರೆ ನಮ್ಮಲ್ಲಿ ನವ ಚಿಂತನ,ಮಂಥನ ಭಾವಲೋಕ ಸೃಜನಶೀಲವಾಗಿ ಸೃಷ್ಟಿಸುತ್ತದೆ. ಉಲ್ಲಾಸಿತ ಭಾವದೊಂದಿಗೆ ಜ್ಞಾನೋದಯದ ಪಳಿಕೆ ಇಮ್ಮಡಿಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ. ಈಗದು ಸತ್ಯವಾಗುತ್ತಲ್ಲಿದೆ ಎಂದರು.
ಯೋಗ ಕೇವಲ ದೈಹಿಕ ಮತ್ತು ಮಾನಸಿಕ ನಿಯಂತ್ರಣ ಕಸರತ್ತಿಗಾಗಿ ಮೀಸಲಾಗಬಾರದು.ಅದೊಂದು ನಮ್ಮ ಬದುಕಿನ ಲವಲವಿಕೆಯ ತಿಳುವಳಿಕೆ,ನಡುವಳಿಕೆ,ವ್ಯಕ್ತಿತ್ವದ ಸೂತ್ರವಾಗಬೇಕು. ಪತಂಜಲಿ ಮಹರ್ಷಿಗಳು ಯೋಗ ಸೃಷ್ಟಿಸಿ ನಮಗೆಲ್ಲ ಅದರ ರೂಪ ಲಾವಣ್ಯದ ರಸಧಾರೆ ಎರೆದಿದ್ದಾರೆ ಎಂದರು.
ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಗೆ, ಬಾಲಕಿಯರಿಗೆ ಯೋಗದ ಮಹತ್ವ ಮನವರಿಕೆ ಮಾಡಿಕೊಟ್ಟರು. ಆರೋಗ್ಯಯುತ ಜೀವನ ಕಂಡುಕೊಳ್ಳಲು ಔಷಧೀಯ ಉಪಚಾರಗಳಿಲ್ಲದೇ ಸರಳೋಪಾಯದ ವ್ಯಾಯಾಮಕ್ಕೆ ಮಣೆ ಹಾಕಬೇಕು. ಸದೃಢ ಯುವಕರೇ ದೇಶದ ಬೆನ್ನೆಲುಬು. ಸಮಾಜದ ಆಧಾರ ಸ್ತಂಭ. ಕಾರಣ ಯೋಗ ಹವ್ಯಾಸದ ಪ್ರೇಮಾಂಕುರ ಮೈಗೂಡಿಸಿಕೊಂಡು ತಮ್ಮ ಆರೋಗ್ಯ ಭಾಗ್ಯ ಉತ್ತಮವಾಗಿರಿಸಿಕೊಳ್ಳಬೇಕು ಎಂದು ಬಸವರಾಜ ಅನಂತಪುರ ಅಭಿಪ್ರಾಯಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ಡಾ,ಆನಂದ ತೇಲಸಂಗ ಮಾತನಾಡಿ, ಆರೋಗ್ಯಭರಿತ ವ್ಯಕ್ತಿತ್ವದ ರೂಪಧಾರಣೆಗೆ ನಿಯಮಿತವಾಗಿ ವಾಕಿಂಗ್, ಜ್ವಾಗಿಂಗ್ ಕಸರತ್ತಿನಲ್ಲಿ ಬೆವರಿಳಿಸಬೇಕು. ಸಮಾಜಮುಖಿ ಚಿಂತನೆ ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿ ಮೂಡಬೇಕು.ಬಗೆಬಗೆಯ ಟೆನ್ಷನ್ ಗಳಿಗೆ ತಲೆಕೆಡಿಸಿಕೊಳ್ಳಬಾರದು.ಸಮಚಿತ್ತದಿಂದ ಕೆಲಸ,ಕಾಯಕಗಳನ್ನು ನಿಭಾಯಿಸಿಕೊಳ್ಳುವ ಮನೋಸ್ತುತಿ ಹೊಂದಬೇಕು. ಜಾತಿ,ಧರ್ಮ,ಭಾಷೆ,ಪ್ರದೇಶಗಳನ್ನೆದೇ ಯೋಗಕ್ಕೆ ಇಂದು ಪ್ರಪಂಚದಾದ್ಯಂತ ಭಾರೀ ಮನ್ನಣೆ ದೊರೆಯುತ್ತಿದೆ. ಬಹುತೇಕ ಜನತೆ ಯೋಗ ಒಲವಿನ ಪ್ರೀತಿಯಲ್ಲಿ ಮೊಳಗಿ ತಮ್ಮ ಶರೀರ,ಆರೋಗ್ಯ ಸುರಕ್ಷತೆಗಾಗಿ ತನ್ಮರಾಗುತ್ತಿರುವು ಆರೋಗ್ಯಕರ ಅಭ್ಯಾಸಗಳು ನಡೆಯುತ್ತಿರುವುದು ಉತ್ತಮ ಸಂಗತಿ ಎಂದರು.
ಪ್ರಾಥಮಿಕ ಶಾಲೆಯ ಸುರೇಶ ಸಂತಿ ಮಾತನಾಡಿ, ಆರೋಗ್ಯಯುತ ಜೀವನ ಮಾರ್ಗದ ಪಯಣ ಗಟ್ಟಿಗೊಳಿಸಲು ಜನ ಯೋಗ ವ್ಯಾಮೋಹ ಹೆಚ್ಚಿಸಿಕೊಳ್ಳುತ್ತಲ್ಲಿದ್ದಾರೆ.ಯೋಗ ಜಗದೆಡೆಲ್ಲಿಂದು ಜನಪ್ರಿಯತೆ ಗಳಿಸಿದೆ. ಪ್ರಾಕೃತಿಕ ಸರಳ ಸಹಜ ಸ್ವಾಭಾವಿಕ ವಿಧಾನದಿಂದ ಆರೋಗ್ಯ ಪೂರ್ಣ ಜೀವನಶೈಲಿಯಲ್ಲಿ ದಾಪುಗಾಲಿರಿಸಲು ಯೋಗಾಭ್ಯಾಸದಲ್ಲಿ ನಾವುಗಳೆಲ್ಲ ಆಸಕ್ತಿಯಿಂದ ನಿರತರಾಗುವುದು ಅತ್ಯುತ್ತಮ ಕೆಲಸ.ಯೋಗ ಒಂದು ಸಂಜೀವಿನಿ.ಅದು ಆರೋಗ್ಯವಲ್ಲದೆ ಶಿಕ್ಷಣದ ಮೌಲ್ಯ ಹೆಚ್ಚಿಸಲು ಕೂಡಾ ಪೂರಕವಾಗಿದೆ ಎಂದರು.
ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ. ಗೌರವ ಶಿಕ್ಷಕಿಯರಾದ ಸಹನಾ ಹತ್ತಳ್ಳಿ, ಕವಿತಾ ಅಂಬಿ, ಪ್ರಮೀಳಾ ತೇಲಸಂಗ, ಕುಮಾರ ವಾಣಿ, ಪ್ರಾಥಮಿಕ ಶಾಲೆ ಮುಖ್ಯ ಗುರು ಶಿವಕುಮಾರ ಅರಳ್ಳಬಳ್ಳಿ, ಬಾಳೇಕುಂದ್ರಿ ಪ್ರಾಥಮಿಕ ಶಾಲೆ ಮುಖ್ಯ ಗುರುಮಾತೆ ಕಲ್ಯಾಣಿ, ಐಐಟಿ ಕಾಲೇಜಿನ ಪ್ರಾಚಾರ್ಯರು,ಸಿಬ್ಬಂದಿಗಳು, ಆಶಾ ಕಾರ್ಯಕತೆ9ಯರು, ಬಿಸಿಯೂಟದ ಸಿಬ್ಬಂದಿಗಳು ಸೇರಿದಂತೆ ಹಲವರಿದ್ದರು.
ಶಾಲಾ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸುವ ಮೂಲಕ ಅಂತರರಾಷ್ಟ್ರೀಯ ಹತ್ತನೇ ಯೋಗ ದಿನಾಚರಣೆಗೆ ಇಲ್ಲಿ ಚಾಲನೆ ನೀಡಲಾಯಿತು. ಹಲ ವೈವಿಧ್ಯಮಯ ಯೋಗ ಭಂಗಿಗಳಲ್ಲಿ ಮಕ್ಕಳು ಮಿಂದೆದ್ದು ಖುಷಿಪಟ್ಟರು. ಮಕ್ಕಳೊಂದಿಗೆ ಗುರುದೇವೋಭ ಬಳಗ ಸಹ ಯೋಗದ ಆಸನಗಳ ಕಸರತ್ತಿನಲ್ಲಿ ಗಮನ ಸೆಳೆದರು. ಶಾಲಾ ಮಕ್ಕಳಿಗೆ ಕಾರ್ಯಕ್ರಮದ ಬಳಿಕ ಅಕ್ಷರ ದಾಸೋಹದ ಅಡುಗೆ ಮಾತೆಯರು ರುಚಿಕಟ್ಟಾಗಿ ತಯಾರಿಸಿದ ಪಾಯಸಾದೊಂದಿಗೆ ಸಿಹಿ ಭೋಜನದ ಉಪಹಾರದ ವಿತರಿಸಲಾಯಿತು.
ಲೋಹಿತ ಮಿಜಿ9 ಸ್ವಾಗತಿಸಿದರು. ಸದಾಶಿವ ಸಿದ್ದಾಪುರ ನಿರೂಪಿಸಿದರು. ಈರಣ್ಣ ದೇಸಾಯಿ ವಂದಿಸಿದರು.