ಸಂಗೀತಕ್ಕಿದೆ ರೋಗ ನಿವಾರಣೆ ಶಕ್ತಿ
ಕಲಬುರಗಿ:ಜೂ.22: ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿ ಮಾನವ ಇಂದು ತನ್ನ ಜೀವನ ಸಾಗಿಸುತ್ತಿದ್ದು, ಶಾಂತಿ. ಸಮಾದಾನ, ನೆಮ್ಮದಿ ಇಲ್ಲದಂತಾಗಿದೆ. ಸುಮಧುರವಾದ ಸಂಗೀತವನ್ನು ಆಲಿಸುವದರಿಂದ ಮಾನಸಿಕ ಒತ್ತಡದಿಂದ ಮುಕ್ತಗೊಳಿಸಿ, ಮನಸಿಗೆ ನೆಮ್ಮದಿ ದೊರೆಯತ್ತದೆ. ರೋಗವನ್ನು ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕಿದೆಯೆಂದು ವೈಜ್ಞಾನಿಕವಾಗಿ ನಿರೂಪಣೆಯಾಗಿದ್ದು ಸಂಗೀತದ ಮಹತ್ವ ತೋರಿಸುತ್ತದೆ ಎಂದು ಹಿರಿಯ ಸಂಗೀತ ಕಲಾವಿದ ಶರಣು ಕಾಂಬಳೆ ಅಭಿಮತಪಟ್ಟರು.
ನಗರದ ಆಳಂದ ಚೆಕ್ ಪೋಸ್ಟ್ ಸಮೀಪವಿರುವ ‘ಗಾನ ಗಂಧರ್ವ ಸಂಗೀತ ಪಾಠಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರÀವಾರ ಸಂಜೆ ಜರುಗಿದ ‘ವಿಶ್ವ ಸಂಗೀತ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಸಂಗೀತದ ಅಭಿರುಚಿ ಬೆಳೆಸಬೇಕು ಎಂಬ ಉದ್ದೇಶದಿಂದ ಸಂಗೀತ ಪಾಠಶಾಲೆ ಆರಂಭಿಸಿದ್ದೇನೆ. ನನಗೆ ಹಣ ಗಳಿಕೆ ಉದ್ದೇಶವಲ್ಲ. ನಾನು ಕಲಿತ ಸಂಗೀತ ವಿದ್ಯೆ ನಾಲ್ಕು ಜನರಿಗೆ ಹಂಚಿದರೆ, ನಮ್ಮ ಭಾಗದ ಮಕ್ಕಳು ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ, ನನ್ನ ವಿದ್ಯೆ ಮತ್ತಷ್ಟು ಬೆಳೆಯುತ್ತದೆ ಎಂಬುದು ನನ್ನ ಆಶಯವಾಗಿದೆ. ಇದರಿಂದ ನನಗೆ ಆತ್ಮತೃಪ್ತಿ ದೊರೆಯುತ್ತದೆ. ಇದಕ್ಕೆ ಸಂಗೀತ ಮನಸ್ಸುಗಳ ಸಹಕಾರ ಅಗತ್ಯವಾಗಿದೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಪ್ರಾಚೀನ ಕಾಲದಿಂದಲೂ ಸಂಗೀತವು ನಮ್ಮ ಸಂಸ್ಕøತಿಯ ಒಂದು ಭಾಗವಾಗಿ ಕಂಡು ಬರುತ್ತಿದೆ. ಹಿಂದಿನ ದಿನಗಳಲ್ಲಿ ಮನೆಯಲ್ಲಿ ಹಿರಿಯರು ಮಕ್ಕಳಿಗೆ ಹಾಡಿ, ಸಂತೋಷಗೊಳಿಸುತ್ತಿದ್ದರು. ಆದರೆ ಆಧುನಿಕ ಕಾಲದಲ್ಲಿ ಇವೆಲ್ಲಾ ಮಾಯವಾಗುತ್ತಿವೆ. ನಮ್ಮ ಭಾಗದಲ್ಲಿ ಅನೇಕ ಜನ ಪ್ರತಿಭಾವಂತ ಸಂಗೀತ ಕಲಾವಿದರಿದ್ದಾರೆ. ಅವರನ್ನು ಗುರುತಿಸಿ, ಪ್ರೋತ್ಸಾಹಿಸಿದರೆ ಹೆಚ್ಚಿನ ಸೇವೆ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಬಳಗವು ಕಾರ್ಯ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಸುನೀಲಕುಮಾರ ಎಚ್.ಬಿ.ವಂಟಿ, ಮಹಾಂತೇಶ ಬಿರಾದಾರ, ಶಿವಯೋಗೆಪ್ಪಾ ಎಸ್.ಬಿರಾದಾರ, ಹವ್ಯಾಸಿ ಸಂಗೀತ ಕಲಾವಿದರಾದ ಪ್ರಕಾಶ ಸರಸಂಬಿ, ಸಿದ್ದರಾಮ ರೆÀಡ್ಡಿ, ಸಂಜೀವಕುಮಾರ ಡೋಣಿ, ಖಾಜಾ ನಾಯಕವಾಡಿ, ಅಬ್ಬಾಸಲಿ ಚಿಗರಳ್ಳಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ನಂತರ ವಚನ, ಜಾನಪದ ಗೀತ ಗಾಯನ ಜರುಗಿತು. ಕಲಾವಿದರಿಗೆ ಗೌರವಿಸಲಾಯಿತು.