ರೋಗ ದೂರಮಾಡುವ ಶಕ್ತಿ ಯೋಗಕ್ಕಿದೆ:ಯಡ್ರಾಮಿ
ತಾಳಿಕೋಟೆ:ಜೂ.22: ತಾಲೂಕಿನ ತುಂಬಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಪತ್ತೇಪೂರ ಗ್ರಾಮದ ಅಮೃತ ಸರೋವರ ಕೆರೆ ಆವರಣದಲ್ಲಿ ಐಇಸಿ ಸಂಯೋಜಕರು ತಾಲೂಕ ಪಂಚಾಯತ ವತಿಯಿಂದ ಗ್ರಾಮಸ್ಥರ ಹಾಗೂ ಶಾಲಾ ವಿದ್ಯಾರ್ಥಿಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಮನರೇಗಾ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಜಾತ ಯಡ್ರಾಮಿ ಅವರು ಮಾತನಾಡಿ ಸದೃಡ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗವು ಅತ್ಯಾವಶ್ಯಕ ಯೋಗದಿಂದ ಅಸ್ತಮಾ, ದಮ್ಮು, ಕೆಮ್ಮು ಅಲ್ಲದೇ ಅನೇಕ ರೋಗಗಳು ದೂರ ಮಾಡುವ ಶಕ್ತಿ ಯೋಗದಲ್ಲಿ ಅಡಗಿದೆ ಎಂದು ಯೋಗದಿಂದ ಆಗುವ ಲಾಭಗಳ ಕುರಿತು ವಿವರಿಸಿದರು.
ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಮಲ್ಲಿಕಾರ್ಜುನ ಅವರು ಮಾತನಾಡಿ ಯೋಗ ದಿನಾಚರಣೆ ದಿನದಂದು ಯೋಗ ಮಾಡುವದಲ್ಲ, ಪ್ರತಿದಿನ ಯೋಗ ಮಾಡುಬೇಕು ಇದರಿಂದ ದೈಹಿಕವಾಗಿ ಮಾನಸಿಕವಾಗಿ ಮನುಷ್ಯನು ಸದೃಢಗೊಳ್ಳಲಿದ್ದಾನೆಂದರು.
ಈ ಸಮಯದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಗೌತಮ ಹರಿಜನ, ಸದಸ್ಯರಾದ ರಾಮನಗೌಡ ಹಾದಿಮನಿ, ಮದಮಾಬಿ ಮಕಂದಾರ, ಟಿಸಿ ನಾಗರಾಜ, ಐಇಸಿ ಸಂಯೋಜಕರಾದ ಮಲಕಪ್ಪ, ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಎ.ಜಿ.ಹುಚನೂರ, ಸಹ ಶಿಕ್ಷಕರು, ಗ್ರಾ.ಪಂ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಮತ್ತು ಮಕ್ಕಳು ಉಪಸ್ಥಿತರಿದ್ದರು.