ಯೋಗದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ : ಶಾಸಕ ಲಕ್ಷ್ಮಣ ಸವದಿ
ಅಥಣಿ:ಜೂ.22: ಪ್ರತಿಯೊಬ್ಬರೂ ದಿನನಿತ್ಯ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಉತ್ಸಾಹವನ್ನು ಹೆಚ್ಚಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಎಲ್ಲರೂ ನಮ್ಮ ಪ್ರಾಚೀನ ಪರಂಪರೆಯ ಪ್ರಮುಖ ಕೊಡುಗೆಯಾಗಿರುವ ಯೋಗವನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಪತಂಜಲಿ ಯೋಗ ಸಮಿತಿ, ತಾಲೂಕ ಆಡಳಿತ, ಸರ್ಕಾರಿ ಪ್ರಥಮ ದರ್ಜೆಪದವಿ ಮಹಾವಿದ್ಯಾಲಯ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2024 ಹಾಗೂ ಯೋಗ ಮತ್ತು ಪ್ರಾಣಾಯಾಮ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ನಿತ್ಯ ಆಚರಣೆ ಮಾಡುವುದರಿಂದ ಲಾಭ ಹೊಂದಲು ಸಾಧ್ಯ ಎಂದ ಅವರು ಭಾರತೀಯ ಇತಿಹಾಸದಲ್ಲಿ ಯೋಗಕ್ಕೆ ಆರು ಸಾವಿರ ವರ್ಷಗಳ ಇತಿಹಾಸವಿದೆ. ಹಿಂದೆ ಋಷಿ-ಮುನಿಗಳು ಹಾಗೂ ತಪಸ್ವಿಗಳು ಯಾವುದೇ ಕಾಯಿಲೆ ಇಲ್ಲದೇ ಯೋಗದ ಮುಖಾಂತರ ಮಾತ್ರ ಸರ್ವರೋಗಗಳು ಗುಣಮಾಡಿಕೊಂಡು ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು ಎಂದರು.
ಅಥಣಿ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಎಸ್.ಕೆ ಹೊಳೆಪ್ಪನವರ ನೇತೃತ್ವದಲ್ಲಿ ಯೋಗ ಪ್ರಾತ್ಯಕ್ಷಿಕೆ ಜರುಗಿತು.
ಸರ್ಕಾರಿ ಪ್ರಥಮಷದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಾಂತಿನಾಥ ಬಳೋಜ ಅಧ್ಯಕ್ಷತೆ ವಹಿಸಿ ಮಾತನಾಡಿ ಯೋಗ ಋಷಿಮುನಿಗಳು ಜಗತ್ತಿಗೆ ನೀಡಿದ ಮಹಾನ್ ಕೊಡುಗೆ ಯೋಗದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಇದರಲ್ಲಿ ವಿದೇಶಿಗರು ಹೆಚ್ಚು ಆಕರ್ಷಿತರಾಗುತ್ತಿರುವುದು ವಿಶೇಷ. ಯೋಗ ಕಲಿತರೆ ವಿದ್ಯಾರ್ಥಿಗಳಲ್ಲಿ ತಾಳ್ಮೆ, ವ್ಯಕ್ತಿತ್ವ ವಿಕಸನ, ಕಲಿಕೆಯ ಗುಣಮಟ್ಟ ಹೆಚ್ಚುತ್ತದೆ.
ಮನಃಶಾಂತಿ ಪಡೆಯಲು, ಆತ್ಮ ವಿಶ್ವಾಸಗಳಿಸಲು ಹಾಗೂ ದಿನವಿಡೀ ಲವಲವಿಕೆಯಿಂದ ಇರಲು ಯೋಗ ಸಹಕಾರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯೋಗ ಶಿಕ್ಷಕ ಬಸವರಾಜ ಬಿಳ್ಳೂರ ಬರೆದಿರುವ “ದೇಹ ಮತ್ತು ಆತ್ಮದ ಅರೋಗ್ಯಕ್ಕಾಗಿ ಯೋಗ” ಪುಸ್ತಕ ಬಿಡುಗಡೆ ಜರುಗಿತು.ಯೋಗ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ವಾಣಿ ಯು, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಅಭಿಯಂತರ ವೀರಣ್ಣ ವಾಲಿ, ರವೀಂದ್ರ ಮುರಗಾಲಿ, ನೌಕರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ವಿಲಾಸ್ ಕಾಂಬಳೆ, ಅಮ್ಮಣ್ಣ ಕುರುಂದವಾಡ ಸೇರಿದಂತೆ ಇನ್ನಿತರ ಅಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು, ವಿವಿಧ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಿದ್ದರು .
ಈ ವೇಳೆ ರಾಮಣ್ಣ ಧರಿಗೌಡ, ರಾಮನಗೌಡ ಪಾಟೀಲ್ (ಶಿವನೂರ), ಡಾ ರಾಮಣ್ಣ ದೊಡ್ಡನಿಂಗಪ್ಪಗೋಳ, ಡಾ ವಿಜಯ್ ಕಾಂಬಳೆ, ಅಪ್ಪಾಸಾಹೇಬ ಅಲಿಬಾದಿ,ಡಾ ಆರ್ ಎಸ್ ಅಂಬಿ, ಸುರೇಶ ಚಿಕ್ಕಟ್ಟಿ,ಎಸ್ ಎಸ್ ದೇವರೆಡ್ಡಿ, ಶಿವಾನಂದ ಮಾಲಗಾವಿ, ವಿಕಾಸ ತಾಂಬಟ, ಶ್ರೀಶೈಲ ಪಾಟೀಲ್, ಭಾರತಿ ಅಲಿಬಾದಿ, ಗೀತಾ ತಾಂಬಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.