ಜನಸೇವಾ ಶಾಲೆಯಲ್ಲಿ ಯೋಗ ದಿನಾಚರಣೆ
ಬೀದರ್:ಜೂ.22: ಜನಸೇವಾ ಪ್ರತಿಷ್ಠಾನ ವತಿಯಿಂದ ಇಲ್ಲಿನ ಜನಸೇವಾ ಬಡಾವಣೆಯ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜರುಗಿತು.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗತ್ತು ಇಂದು ಯೋಗವನ್ನು ಅಪ್ಪಿಕೊಂಡಿದೆ. ಭಾರತದ ಸಂಸ್ಕøತಿ, ಪರಂಪರೆ, ಪ್ರಾಚೀನ ಆಚರಣೆಗಳು ವೈಜ್ಞಾನಿಕತೆಯಿಂದ ಕೂಡಿವೆ ಎಂಬುದಕ್ಕೆ ಯೋಗವೇ ಸಾಕ್ಷಿ. ಧರ್ಮ, ಸಂಸ್ಕøತಿ, ಯೋಗದಲ್ಲಿ ಭಾರತ ಇಂದು ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿ ನಿಲ್ಲಿಸಿದೆ. ನಮ್ಮ ದೇಶದ ಅಧ್ಯಾತ್ಮ ಶಕ್ತಿ ಎಷ್ಟು ಶ್ರೇಷ್ಠ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಕೆ ಪರಿಚಯಿಸುತ್ತಿದ್ದಾರೆ ಎಂದರು.
ದಿನಾಲೂ ಯೋಗ ಮಾಡಿದರೆ ರೋಗದಿಂದ ಸಂಪೂರ್ಣ ದೂರವಾಗಿ, ನಿರೋಗಿಗಳಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಯೋಗದಲ್ಲಿ ಎಲ್ಲ ರೋಗಗಳಿಗೆ ಕಡಿವಾಣ ಹಾಕುವ ಶಕ್ತಿಯಿದೆ. ಯೋಗವು ಪ್ರಾಚೀನ ಕಾಲದಿಂದಲೂ ಬಂದಿದೆ. ಇದರಿಂದಾಗಿಯೇ ಇದಕ್ಕೆ ಸಾಕಷ್ಟು ಮನ್ನಣೆ ದೊರೆಯಲು ಸಾಧ್ಯವಾಗಿದೆ. ಹಲವಾರು ಮಹಾನ್ ಪುರುಷರು ಅದರ ಮಹತ್ವ ಅರಿತು ಜೀವನದಲ್ಲಿ ಅಳವಡಿಸಿಕೊಂಡು ಯೋಗಿಗಳಾಗಿದ್ದರು. ಹೀಗಾಗಿ ಎಲ್ಲರೂ ಯೋಗ ಮಾಡುವುದು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಜ್ಞಾಪಕ ಶಕ್ತಿ ಹೆಚ್ಚಿಸಲು ಯೋಗ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಯೋಗವನ್ನು ಅಧ್ಯಯನದ ಒಂದು ಭಾಗವಾಗಿ ಮಾಡಿಕೊಳ್ಳಬೇಕು. ಉತ್ತಮ ವಿಚಾರ, ಸಕಾರಾತ್ಮಕ ಚಿಂತನೆ, ಏಕಾಗ್ರತೆ, ನೆಮ್ಮದಿ, ತಾಳ್ಮೆ, ಶಿಸ್ತಿನ ಜತೆಗೆ ಬುದ್ಧಿ ಮತ್ತು ಮನಸ್ಸು ನಿಯಂತ್ರಣದಲ್ಲಿಡುವ ಶಕ್ತಿ ಯೋಗಕ್ಕೆ ಮಾತ್ರವಿದೆ ಎಂದು ಹೇಳಿದರು.
ಯೋಗ ಶಿಕ್ಷಕಿ ಮಹಾದೇವಿ ಬಿರಾದಾರ್ ಉಪನ್ಯಾಸ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ಬಾಬುರಾವ ಕಾರಬಾರಿ, ಸಂಸ್ಥೆ ಆಡಳಿತಾಧಿಕಾರಿ ಸೌಭಾಗ್ಯವತಿ, ಪ್ರಾಥಮಿಕ ಶಾಲೆ ಮುಖ್ಯಗುರು ನೀಲಮ್ಮ ಚಾಮರಡ್ಡಿ, ಪ್ರೌಢ ಶಾಲೆ ಮುಖ್ಯಗುರು ರಾಹುಲ್ ಮೇತ್ರಸ್ಕರ್, ಪತ್ರಕರ್ತ ರೇವಣಸಿದ್ದಪ್ಪ ಪಾಟೀಲ್, ವಿಲಾಸ ಪಾಟೀಲ್ ಹಾಗೂ ಶಿಕ್ಷಕರು ಇದ್ದರು. ಭಾರ್ಗವಿ ಅಷ್ಟಗಿ ನಿರೂಪಣೆ ಮಾಡಿದರು. ಸತೀಶ್ ಚಿಮ್ಮಾ ವಂದಿಸಿದರು. ಅಶ್ವಿನಿ ಎಸ್. ಸ್ವಾಮಿ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.