ಶಾಸಕ ಪ್ರಭು ಚವ್ಹಾಣರಿಂದ ಸಂತಪೂರ ಆಸ್ಪತ್ರೆ ಉದ್ಘಾಟನೆ
ಬೀದರ:ಜೂ.22:ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಜೂನ್ 21 ರಂದು ಸಂತಪೂರನಲ್ಲಿ 5.68 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ದೊಡ್ಡ ಹೋಬಳಿ ಕೇಂದ್ರವಾಗಿರುವ ಸಂತಪೂರನಲ್ಲಿ ಆಸ್ಪತ್ರೆ ಸಾಕಷ್ಟು ಚಿಕ್ಕದಾಗಿತ್ತು ಮತ್ತು ಶಿಥಿಲವಾಗಿತ್ತು ಈಗಿನ ಜನಸಂಖ್ಯೆಗೆ ತಕ್ಕಂತೆ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಬೇಕೆಂಬುದು ಬಹಳ ದಿನಗಳ ಆಸೆಯಿತ್ತು. ಅದು ಈಗ ನೆರವೇರಿದೆ. ಸಾರ್ವಜನಿಕರು ಇದರ ಲಾಭ ಪಡೆಯಬೇಕೆಂದು ಕೋರಿದರು.
ವೈದ್ಯರು ಸರಿಯಾಗಿ ಕೆಲಸ ಮಾಡಬೇಕು. ಆಸ್ಪತ್ರೆಗೆ ಬರುವ ರೋಗಿಗಳ ಜೊತೆಗೆ ಸರಿಯಾಗಿ ವ್ಯವಹರಿಸಬೇಕು. ಸಣ್ಣ ಪುಟ್ಟ ಸಮಸ್ಯೆಗಳಿಗೆ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಕಳುಹಿಸದೇ ರೋಗಿಗಳ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಆಸ್ಪತ್ರೆಯ ಅಭಿವೃದ್ಧಿಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ವೈದ್ಯರು ಮತ್ತು ಸಿಬ್ಬಂದಿ ದೂರುಗಳಿಗೆ ಆಸ್ಪದವಿಲ್ಲದಂತೆ ಕೆಲಸ ಮಾಡಬೇಕೆಂದು ಸೂಚಿಸಿದರು.
ಸುಮಾರು 25 ಕೋಟಿಯ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ: ಖೇರ್ಡಾ(ಬಿ), ಭಂಡಾರಕುಮಟಾ, ಖೇರ್ಡಾ ತಾಂಡಾ, ಅಂಬರ ನಾಯಕ್ ತಾಂಡಾ, ಹುಲ್ಯಾಳ, ಡೊಂಗರಗಾಂವ, ವಸಿರಾಮ ನಾಯಕ್ ತಾಂಡಾ, ಸೇವಾ ನಾಯಕ್ ತಾಂಡಾ, ಹಸ್ಸಿಖೇರಾ, ಹಸ್ಸಿಖೇರಾ ತಾಂಡಾ, ಗೌಂಡಗಾಂವ ತಾಂಡಾ, ಫುಲಸಿಂಗ್ ತಾಂಡಾ, ಬೆಳಕೋಣಿ(ಸಿಹೆಚ್), ಹೆಡಗಾಪೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಶಾಲೆಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ, ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ, ರಸ್ತೆ, ಅಂಗನವಾಡಿ ಕಟ್ಟಡ, ಸಿಸಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಭೂಮಿ ಪೂಜೆ ಮತ್ತು ಉದ್ಘಾಟನೆ ನೆರವೇರಿಸಿದರು.
ಸಾರ್ವಜನಿಕರಿಗೆ ಅತ್ಯವಶ್ಯಕವಾಗಿರುವ ಕೆಲಸಗಳಿಗೆ ಚಾಲನೆ ನೀಡಲಾಗುತ್ತಿದೆ. ಈ ಎಲ್ಲ ಕಾಮಗಾರಿಗಳು ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು. ಗುಣಮಟ್ಟದ ವಿಚಾರದಲ್ಲಿ ಯಾವುದೇ ರೀತಿಯ ದೂರುಗಳಿಗೆ ಆಸ್ಪದ ನೀಡಬಾರದು. ಅಧಿಕಾರಿಗಳು ಆಗಾಗ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟದಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಗ್ರಾಮಸ್ಥರು ಕೂಡ ಮುತುವರ್ಜಿ ವಹಿಸಿ ಕೆಲಸ ಸರಿಯಾಗುವಂತೆ ನೋಡಿಕೊಳ್ಳಬೇಕೆಂದು ಕೋರಿದರು.
ಖೇರ್ಡಾ.ಬಿ, ಹಸ್ಸಿಖೇರಾ ಹಾಗೂ ಮತ್ತಿತರೆ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದರಲ್ಲೇ ಇವುಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ಶುದ್ಧ ನೀರಿನ ಘಟಕಗಳ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗಬೇಕು. ಗ್ರಾಮಸ್ಥರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಲಭಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರ ಅಹವಾಲು ಸ್ವೀಕಾರ: ಗ್ರಾಮ ಸಂಚಾರದ ವೇಳೆ ಶಾಸಕರು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಗ್ರಾಮಸ್ಥರು ತಮ್ಮ ಗ್ರಾಮದಲ್ಲಿರುವ ಸಮಸ್ಯೆಗಳು ಹಾಗೂ ಮುಂದಿನ ದಿನಗಳಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು. ಎಲ್ಲ ಗ್ರಾಮಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಆದ್ಯತೆ ಕೊಡಲಾಗಿದೆ. ಅದರಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಎಲ್ಲ ಬೇಡಿಕೆಗಳನ್ನು ಆದ್ಯತೆಗೆ ಅನುಗುಣ ಪರಿಹರಿಸಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ನಾಗನಾಥ ಚಿಕ್ಲೆ, ಶಿವರಾಜ ಅಲ್ಮಾಜೆ, ಸಚಿನ ರಾಠೋಡ್, ರಾಮ್ ಪಾಟೀಲ, ಪ್ರವೀಣ ಕಾರಬಾರಿ, ಅಮೃತರಾವ ವಟಗೆ, ಸುಜಿತ್ ರಾಠೋಡ್, ಗಜಾನಂದ ವಟಗ, ರಾಜಪ್ಪ ಸೋರಾಳೆ, ಸಚಿನ್ ಬಿರಾದಾರ, ಕೇರಬಾ ಪವಾರ್ ಹಾಗೂ ಇತರರು ಉಪಸ್ಥಿತರಿದ್ದರು.