ಜಿಲ್ಲಾಧಿಕಾರಿಗಳಿಂದ ಜನಸ್ಪಂದನ ಸಭೆ89 ಅರ್ಜಿಗಳ ಸ್ವೀಕೃತ, 15 ದಿನ ಕಾಲಮಿತಿಗೆ ಸೂಚನೆ
ಔರಾದ :ಜೂ.22: ಪಟ್ಟಣದ ಮಿನಿ ವಿಧಾನಸೌಧದ ತಾಲೂಕು ಆಡಳಿತ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳಿಂದ ಜನ ಸ್ಪಂದನ ಕಾರ್ಯಕ್ರಮಕ್ಕೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಸುಮಾರು 89 ಅರ್ಜಿಗಳನ್ನು ಮಾನ್ಯ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸ್ವೀಕರಿಸಿದರು.
ಗ್ರಾಮಿಣ ಭಾಗದ ಜನರಿಗೆ ಜಮಿನುಗಳಿಗೆ ತೆರಳಲು ಕಾಲು ದಾರಿ, ಭೂಮಿ ವಿವಾದ, ಪಹಣಿ ತಿದ್ದುಪಡಿ, ಪಡಿತರ ಚೀಟಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಬಳಿಕ ಜಿಲ್ಲಾಧಿಕಾರಿಗಳು ಮನವಿಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆಗಳನ್ನು ಬಗೆ ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗೀರಿಶ ಬಡೋಲೆ ಕೂಡ ಅಧಿಕಾರಿಗಳಿಗೆ ಮುಂಜಾಗ್ರತೆ ವಹಿಸಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಪರಿಹರಿಸಲು ಆದ್ಯತೆ ನೀಡುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಜನರ ದೈನಂದಿನ ಸಾಮಾನ್ಯ ಸಮಸ್ಯೆಗಳನ್ನು ಅಧಿಕಾರಿಗಳ ಹಾಗೂ ದೂರುದಾರರ ಸಮ್ಮುಖದಲ್ಲಿ ಇತ್ಯರ್ಥಗೊಳಿಸಲು ನಿಯಮಾನುಸಾರ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವಂತೆ ಅವರು ಕಿವಿಮಾತು ಹೇಳಿದರು.
ಜನಸ್ಪಂದನಲ್ಲಿ ವನಮಾರಪಳ್ಳಿ ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆಗೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಪ್ರಾಚಾರ್ಯ ಶಿವಾಜಿ ಪವಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು, ಕಪ್ಪೆಕೇರಿ ಗ್ರಾಮದ ರೈತನೊಬ್ಬ ನನಗೆ ಗೊತ್ತಿಲ್ಲದೆ ನನ್ನ ಜಮಿನಿನಲ್ಲಿ ಸೋಲಾರ ಅಳವಡಿಕೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಮುಂದೆ ಅಳಲು ತೋಡಿಕೊಂಡ, ಇನ್ನು ಸಾಮಾಜಿಕ ಕಾರ್ಯಕರ್ತ ಗುಲಾಮ ದಸ್ತಗೀರ ಚಿಕ್ಲಿ(ಯು) ಗ್ರಾಮದಲ್ಲಿ ಪ್ರೌಢ ಶಾಲೆ ಪ್ರಾರಂಭ ಮಾಡುವಂತೆ ಮನವಿ ಮಾಡಿದರು, ತಾಲ್ಲೂಕಿನಲ್ಲಿ ಅನಧಿಕೃತ ಖಾಸಗಿ ಶಾಲೆಗಳು ನಡೆಯುತ್ತಿವೆ ಅವುಗಳ ನಿಯಂತ್ರಣಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮನವಿ ಮಾಡಿದರು. ಅರ್ಜಿದಾರರು ತಮ್ಮ ತಮ್ಮ ಸಮಸ್ಯೆ ಜಿಲ್ಲಾಧಿಕಾರಿ ಮುಂದೆ ಇಟ್ಟರು ಎಲ್ಲರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಒಟ್ಟು 89 ಅರ್ಜಿಗಳನ್ನು ಸ್ವೀಕರಿಸಿದರು, ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ 15 ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಸಿ ಅರ್ಜಿ ಇತ್ಯರ್ಥ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ. ಗೀರಿಶ ಬಡೋಲೆ, ಎಸ್‍ಪಿ ಚನ್ನಬಸವಣ್ಣ ಎಸ್‍ಲ್, ತಹಸೀಲ್ದಾರ ನಾಗಯ್ಯಾ ಹಿರೇಮಠ, ಇಒ ಬಿರೇಂದ್ರಸಿಂಗ ಠಾಕೂರ್, ಸಿಪಿಐ ರಘುವೀರಸಿಂಗ ಠಾಕೂರ್, ಪಿಎಸ್‍ಐ ಉಪೇಂದ್ರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.