ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ: ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.26: ಮೊಟ್ಟೆ, ಬಾಳೆಹಣ್ಣು ಹಾಗೂ ಶೇಂಗಾಚಿಕ್ಕಿ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶಗಳನ್ನೊಳಗೊಂಡ ಆಹಾರ ಪದಾರ್ಥಗಳಾಗಿದ್ದು ಅಜೀಂ ಪ್ರೇಮ್ ಜಿ ಫೌಂಡೇಶನ್ ರವರಿಗೆ ತಾಲೂಕಿನ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ವಾರದ ಆರು ದಿನಗಳು ಮೊಟ್ಟೆ ವಿತರಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಳೆಯ ವಯಸ್ಸಿನಲ್ಲಿ ಬೆಳೆಯುವ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶಗಳಿಂದ ಕೂಡಿದ ಸಮತೋಲನ ಆಹಾರ ಬೇಕಾಗಿದೆ. ದೇಹದ ಬೆಳವಣಿಗೆ ಅಲ್ಲದೆ ಬೌದ್ಧಿಕ ಬೆಳವಣಿಗೆಗೆ, ಹಾಗೂ ಮಾನಸಿಕ ಬೆಳವಣಿಗೆಗೆ ಮಕ್ಕಳು ಎಲ್ಲಾ ರೀತಿಯ ತರಕಾರಿಗಳು, ಹಣ್ಣುಗಳು, ಮೊಟ್ಟೆ, ಮಾಂಸ, ಕಾಳುಗಳು, ಹಾಲು ಮೊಸರು ಸೇರಿದಂತೆ ವಿವಿಧ ಪೆÇೀಷಕಾಂಶಗಳುಳ್ಳ ಆಹಾರ ಪದಾರ್ಥಗಳನ್ನು ಸೇವಿಸಿದರೆ ಅವರು ದೈಹಿಕವಾಗಿ ಸದೃಢ ಬೆಳವಣಿಗೆಯನ್ನು ಹೊಂದುತ್ತಾರೆ. ಈ ಉದ್ದೇಶದಿಂದ ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಮತ್ತು ಶೇಂಗಾಚಿಕ್ಕಿಯನ್ನು ಕಳೆದ ಒಂದು ವರ್ಷದ ಹಿಂದಿನಿಂದಲೂ ನೀಡಲಾಗುತ್ತಿದೆ. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಪೂರಕ ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಸದೃಢರಾಗಿ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಂಡು ಉತ್ತಮ ಜ್ಞಾನವನ್ನು ಪಡೆಯಬೇಕು. ಆ ಮೂಲಕ ತಂದೆ-ತಾಯಿಗಳಿಗೆ ನಾಡಿಗೆ ಕೀರ್ತಿ ತರುವ ಕೆಲಸವನ್ನು ಮಾಡಬೇಕು. ಅಜೀಂ ಪ್ರೇಮ್ ಜಿ ಫೌಂಡೇಶನ್ ಕೇವಲ ಮೊಟ್ಟೆ ನೀಡುವುದಕ್ಕೆ ಮಾತ್ರ ಸೀಮಿತವಾಗದೆ ಹಲವಾರು ವರ್ಷಗಳಿಂದ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ತನ್ನ ಕಚೇರಿಯನ್ನು ಸ್ಥಾಪಿಸಿ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಹಾಗೂ ಶಿಕ್ಷಕರಿಗೆ ಆಳವಾದ ಜ್ಞಾನವನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ತರಬೇತಿಗಳನ್ನು ನೀಡುತ್ತಾ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು, ಪಿಎಂ ಪೆÇೀಷಣೆ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ಸಮನ್ವಯಾಧಿಕಾರಿ ಹೆಚ್.ಕೆ.ಮಂಜುನಾಥ್,ತಾ.ಕಸಾಪ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಕಾರ್ಯದರ್ಶಿ ಪಿ.ಜೆ.ಕುಮಾರ್, ಹಿರಿಯ ಉಪಾಧ್ಯಕ್ಷ ಎಸ್.ಆರ್.ಆನಂದ್‍ಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು. ಕಾರ್ಯದರ್ಶಿ ವಿಜಯ ನಾರಾಯಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸಿ.ಟಿ.ಲಕ್ಷ್ಮಣಗೌಡ, ತಾಲೂಕು ಎಸ್‍ಸಿ, ಎಸ್‍ಟಿ ನೌಕರರ ಸಂಘದ ಅಧ್ಯಕ್ಷ ಕಟ್ರಯೋಗೇಶ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ರವಿಕುಮಾರ್ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.