ಹಣಕ್ಕೆ ನೀಡುತ್ತಿರುವ ಆದ್ಯತೆ ಆರೋಗ್ಯಕ್ಕೆ ನೀಡಿ; ಮುದ್ದಣ್ಣ
ವಿಜಯಪುರ.ಸೆ.೨೬-ಪರಿಸ್ಥಿತಿ ಹಾಗೂ ದಿನಮಾನಗಳು ಬದಲಾದಂತೆ ಮನುಷ್ಯ ಆರೋಗ್ಯಕ್ಕೆ ಆದ್ಯತೆ ನೀಡುವುದಕ್ಕಿಂತ ಹೆಚ್ಚಾಗಿ ಹಣಕ್ಕೆ ಆದ್ಯತೆ ನೀಡುತ್ತಿರುವುದರಿಂದ ಮನುಷ್ಯನಲ್ಲಿನ ಆರೋಗ್ಯ ಕ್ಷೀಣಿಸುತ್ತಿದ್ದು, ಇಂದಿನ ಪರಿಸ್ಥಿತಿಗೆ ಮನುಷ್ಯ ರಕ್ತದೊತ್ತಡ, ಮಧುಮೇಹ ಮತ್ತಿತರೆ ಕಾಯಿಲೆಗಳಿಲ್ಲದೆ ೬೦ ವರ್ಷಗಳ ತನಕ ಇರುವನೆಂದರೆ ಅದು ಅವನ ಅದೃಷ್ಟವೇ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮುದ್ದಣ್ಣ ತಿಳಿಸಿದರು.
ಅವರು ಇಲ್ಲಿನ ಪುರಸಭೆಯ ಶಹರಿ ರೋಜ್ಗಾರ್ ಯೋಜನಾ ಕಟ್ಟಡದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತರುಗಳಿಂದ ಏರ್ಪಡಿಸಲಾಗಿದ್ದ ಪೋಶನ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಶು ಕಲ್ಯಾಣ ಅಭಿವೃದ್ಧಿ ಯೋಜನೆ ಅಧಿಕಾರಿ ಮಹೇಶ್ ಮಾತನಾಡಿ ಪ್ರತಿಯೊಬ್ಬ ಮಹಿಳೆಯು ಗರ್ಭ ಧರಿಸಿದಂದಿನಿಂದ ಮೂರು ವರ್ಷಗಳ (ಒಂದು ಸಾವಿರ ದಿನದ) ಕಾಲದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಗರ್ಭ ಧರಿಸಿದ ಸಂದರ್ಭದಲ್ಲಿಯೇ ಆಕೆಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವತಿಯಿಂದ ಯೋಜನೆಗಳನ್ನು ರೂಪಿಸಲಾಗಿದ್ದು, ರಕ್ತ ಹೀನತೆ ಆಗದಿರಲು ಆರೋಗ್ಯವಂತ ಶಿಶುವನ್ನು ಹೆರಲು ಹಾಗೂ ಮಗುವಿಗೆ ಉತ್ತಮವಾದ ತಾಯಿ ಹಾಲು ನೀಡಲು ಮತ್ತು ಮಗು ಆರು ತಿಂಗಳ ನಂತರ ತಾಯಿ ಹಾಲಿನೊಂದಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವುದಕ್ಕೆ ಒಂದು ಸಾವಿರ ದಿನದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾ ಸಹಾಯಕರಾದ ರಾಧಾರವರು ಮಾತನಾಡುತ್ತಾ ಮಕ್ಕಳಿಗೆ ಆರು ತಿಂಗಳವರೆಗೆ ಯಾವುದೇ ಕಾರಣಕ್ಕೂ ತಾಯಿಯ ಹಾಲನ್ನು ಹೊರತುಪಡಿಸಿ ಬೇರಾವುದನ್ನೇ ನೀಡಬಾರದೆಂದು ಆರು ತಿಂಗಳ ನಂತರ ತಾಯಿ ಹಾಲಿನೊಂದಿಗೆ ಇತರೆ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಏಕೆಂದರೆ ಆರು ತಿಂಗಳವರೆಗೆ ಮಗುವಿನ ಜೀರ್ಣ ಶಕ್ತಿ ಕ್ರಿಯೆ ಇರುವುದಿಲ್ಲವೆಂದು, ಮಗುವಿನ ಮೆದುಳಿನ ಬೆಳವಣಿಗೆಯು ಆರು ತಿಂಗಳ ನಂತರ ಪ್ರಾರಂಭವಾಗಲಿದ್ದು ಮೂರು ವರ್ಷದವರೆಗೆ ಅದಕ್ಕೆ ಪೌಷ್ಟಿಕಾಂಶಯುಕ್ತ ಆಹಾರ ನೀಡದಿದ್ದಲ್ಲಿ ಅಂಗವಿಕಲತೆ, ರಕ್ತ ಹೀನತೆ, ಮೆದುಳು ಬೆಳವಣಿಗೆ ಆಗದಿರುವುದು ಮತ್ತಿತರೆ ಕೊರತೆಗಳೊಂದಿಗೆ ಮಗು ಬೆಳೆಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಭೀಮ್ ರಾವ್, ನಿವೃತ್ತ ಸರ್ಕಾರಿ ನೌಕರರುಗಳಾದ ಗುಂಡೂರಾಯರು, ರಾಮಮೂರ್ತಿ, ಪುರಸಭಾ ಹಿರಿಯ ಆರೋಗ್ಯ ನಿರೀಕ್ಷಕಿ ಲಾವಣ್ಯ, ಸಹಾಯಕ ಆರೋಗ್ಯ ನಿರೀಕ್ಷಕರಾದ ಸಹನ, ಪುರಸಭಾ ಸಿಬ್ಬಂದಿ ವರ್ಗದವರಾದ ಮಮತಾ, ಪೂರ್ಣಿಮಾ, ಮಂಜುನಾಥ್, ವಿಜಯಪುರ ಪಟ್ಟಣ ವಲಯದ ೨೪ ಅಂಗನವಾಡಿ ಕೇಂದ್ರಗಳ ಅಂಗನವಾಡಿ ಕಾರ್ಯಕರ್ತರುಗಳು ಹಾಗೂ ಸಹಾಯಕರುಗಳು ಉಪಸ್ಥಿತರಿದ್ದರು.