ಪುರಸಭೆ ಅಧ್ಯಕ್ಷೆಯಾಗಿ ಪಂಕಜಾ ಪ್ರಕಾಶ್ ಆಯ್ಕೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.26: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಪಂಕಜಾಪ್ರಕಾಶ್ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಕಾಂಗ್ರೆಸ್ ಪಕ್ಷದ ವತಿಯಿಂದ ಪಂಕಜಾ ಪ್ರಕಾಶ್ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಗಾಯಿತ್ರಿ ಸುಬ್ಬಣ್ಣ ನಾಮಪತ್ರ ಸಲ್ಲಿಕೆ ಮಾಡಿದ್ದರು. ಪುರಸಭೆಯ ಶಹರಿ ರೋಜ್ಗಾರ್ ಭವನದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪಂಕಜಾಪ್ರಕಾಶ್ 14 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಇವರ ಪ್ರತಿಸ್ಪರ್ಧಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗಾಯಿತ್ರಿ ಸುಬ್ಬಣ್ಣ ಕೇವಲ 06 ಮತಗಳನ್ನು ಪಡೆದು ಪರಾಜಿತರಾದರು.
23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್ 11, ಕಾಂಗ್ರೆಸ್ 10, ಬಿಜೆಪಿ 01 ಮತ್ತು ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಇವರೊಂದಿಗೆ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಹಾಗೂ ಜಿಲ್ಲೆಯ ಸಂಸದ ಹೆಚ್.ಡಿ.ಕುಮಾರಸ್ವಾಮಿ ಮತದಾನದ ಹಕ್ಕು ಹೊಂದಿದ್ದು ಒಟ್ಟು 25 ಜನ ಮತದಾನದ ಹಕ್ಕು ಹೊಂದಿದ್ದರು.
ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು, ಸಂಸದ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸದಸ್ಯ ನಟರಾಜು ಹಾಗೂ ಜೆಡಿಎಸ್ ಪಕ್ಷದ ಸದಸ್ಯರಾದ ಶೋಭಾ, ಮತ್ತು ಹೆಚ್.ಡಿ.ಅಶೋಕ್ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪಂಕಜಾಪ್ರಕಾಶ್ ಪರ ಕಾಂಗ್ರೆಸ್ ಸದಸ್ಯರಾದ ಪಂಕಜ, ಖಮರುಲ್ಲಾ ಬೇಗಂ, ಕಲ್ಪನ, ಸುಗುಣ, ಸೌಭಾಗ್ಯ, ಕೆ.ಸಿ.ಮಂಜುನಾಥ್, ಡಿ.ಪ್ರೇಂಕುಮಾರ್, ಕೆ.ಆರ್.ರವೀಂದ್ರಬಾಬು, ಕೆ.ಬಿ.ಮಹೇಶ್, ಹೆಚ್.ಎನ್.ಪ್ರವೀಣ್, ಪಕ್ಷೇತರ ಸದಸ್ಯ ತಿಮ್ಮೇಗೌಡ, ಜೆಡಿಎಸ್ ಸದಸ್ಯರಾದ ಗಿರೀಶ್, ಇಂದ್ರಾಣಿ ಮತ್ತು ಪದ್ಮ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.
ಜೆಡಿಎಸ್ ಅಭ್ಯರ್ಥಿ ಗಾಯಿತ್ರಿ ಪರ ಜೆಡಿಎಸ್ ಸದಸ್ಯರಾದ ಮಹದೇವಿ ನಂಜುಂಡ, ಗಾಯಿತ್ರಿ ಸುಬ್ಬಣ್ಣ, ಶುಭ ಗಿರೀಶ್, ಹೆಚ್.ಆರ್.ಲೋಕೇಶ್, ಕೆ.ಎಸ್.ಸಂತೋಷ್ ಕುಮಾರ್, ಕೆ.ಎಸ್.ಪ್ರಮೋದಕುಮಾರ್ ಬೆಂಬಲ ಸೂಚಿಸಿದರು.
14 ಸದಸ್ಯರ ಬೆಂಬಲ ಪಡೆದ ಪಂಕಜ ಪ್ರಕಾಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿಯಾಗಿದ್ದ ತಹಸೀಲ್ದಾರ್ ಎಸ್.ಯು.ಅಶೋಕ್ ಘೋಷಿಸಿದರು.