10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಧಾರವಾಡ,ಜೂ22: ಮಕ್ಕಳ ಆರೋಗ್ಯ, ಸದೃಡತೆ, ಮಾನಸಿಕ ಬೆಳವಣಿಗೆಗೆ ಯೋಗವು ಸಹಾಯವಾಗುತ್ತದೆ. ಮಕ್ಕಳಿಗೆ ನಿರಂತರವಾಗಿ ಯೋಗ ಕಲಿಸಲು ಕರ್ನಾಟಕ ಬಾಲ ವಿಕಾಸ ಅಕಾಡಮಿಯ ಅನುದಾನದಲ್ಲಿ ಶೇ.20 ರಷ್ಟು ಅನುದಾನ ಮೀಸಲು ಇಡಲಾಗುವುದು ಎಂದು ಕರ್ನಾಟಕ ಬಾಲ ವಿಕಾಸ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಹೇಳಿದರು.
ಅವರು ಆರ್.ಎನ್.ಶಟ್ಟಿ ಜಿಲ್ಲಾ ಕ್ರೀಡಾಂಗಣದ ಒಳಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕ್ರೀಡಾ ಹಾಗೂ ಯುವ ಸಬಲೀಕರಣ ಮತ್ತು ಜಿಲ್ಲಾ ಆಯುಷ್ ಇಲಾಖೆಗಳು ಸಂಯುಕ್ತವಾಗಿ ಆಯೋಜಿಸಿದ್ದ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಸಿಗೆ ನೀರುಣಿಸುವ ಮೂಲಕ ಯೋಗ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಮಕ್ಕಳು ದೇವರ ಸಮಾನ. ಅವರಿಗೆ ಉತ್ತಮ ವ್ಯಕ್ತಿತ್ವ ಹೊಂದಲು ಆರಂಭದಿಂದ ಅಗತ್ಯ ಅವಕಾಶ, ತರಬೇತಿ ಮತ್ತು ಸೌಲಭ್ಯಗಳನ್ನು ನೀಡಬೇಕು. ಈ ಹಿನ್ನಲೆಯಲ್ಲಿ ಬಾಲ ವಿಕಾಸ ಅಕಾಡಮಿಯ ಅನುದಾನದ ಶೇ.20 ರಷ್ಟು ಹಣವನ್ನು ಮಕ್ಕಳ ಯೋಗ ಕಲಿಕೆಗೆ ನೀಡಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಔಷಧಿ ತರಹ ಕೆಲಸ ಮಾಡುತ್ತದೆ. ಯೋಗವನ್ನು ಮಕ್ಕಳಲ್ಲಿ ವೃತ್ತಿಪರವಾಗಿ ಬೆಳೆಸಬೇಕು. ಸದೃಡ ಸಮಾಜ, ರಾಷ್ಟ್ರ ನಿರ್ಮಾಣದಲ್ಲಿ ಉತ್ತಮ ಆರೋಗ್ಯವಂತ ಮಕ್ಕಳ ಪಾತ್ರ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಯೋಗದ ಮಹತ್ವ ಇಂದು ವಿಶ್ವಕ್ಕೆ ಪಸರಿಸಿದೆ. ವಿಶ್ವದ ಅನೇಕ ರಾಷ್ಟ್ರಗಳು ಇಂದು ಯೋಗವನ್ನು ಅಳವಡಿಸಿಕೊಂಡು, ಯೋಗಕ್ಕೆ ಪ್ರಾಧಾನ್ಯತೆ ನೀಡಿವೆ. ಭಾರತ ಇಂದು ಯೋಗದಲ್ಲಿ ವಿಶ್ವ ಗುರು ಆಗಿರುವುದು ನಮ್ಮ ಹೆಮ್ಮೆ ಆಗಿದೆ. ಅನೇಕ ರೋಗಗಳಿಗೆ ಪರಿಹಾರವಾಗಿರುವ ಯೋಗವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು.
ವಿಶ್ವ ಯೋಗ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾ ಪೆÇಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಹೆಚ್ಚುವರಿ ಪೆÇಲೀಸ ಅಧೀಕ್ಷಕ ನಾರಾಯಣ ಬರಮನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶಿಲ್ದಾರ ಡಾ.ಡಿ.ಎಚ್.ಹೂಗಾರ ಸೇರಿದಂತೆ ಶಾಲಾ ಶಿಕ್ಷಣ, ಆಯುಷ್, ಆರೋಗ್ಯ, ಕ್ರೀಡಾ ಮತ್ತು ಯುವ ಸಬಲೀಕರಣ, ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯೋಗ ಸಂಸ್ಥೆಗಳ ಸದಸ್ಯರು, ಯೋಗಪಟುಗಳು ಯೋಗ ಪ್ರದರ್ಶನ ನೀಡಿದರು.
ಜಿಲ್ಲಾಧಿಕಾರಿಗಳು ಹಾಗೂ ಅತಿಥಿಗಳು ವಿದ್ಯಾರ್ಥಿಗಳೊಂದಿಗೆ ವಿವಿಧ ಯೋಗಾಸನಗಳನ್ನು ಹಾಗೂ ಪ್ರಾಣಾಯಾಮ ಮಾಡುವ ಮೂಲಕ ಯೋಗ ದಿನಾಚರಣೆಗೆ ಸಾಥ್ ನೀಡಿದರು.
ಯೋಗ ಶಿಕ್ಷಕರು ಆಸನಗಳ ನಿರ್ದೇಶನಗಳನ್ನು ನೀಡಿದರು. ಆಸನಗಳ ನಿರ್ದೇಶನಕ್ಕೆ ತಕ್ಕಂತೆ ಗಣ್ಯರು, ವಿದ್ಯಾರ್ಥಿಗಳು, ಯೋಗ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು 45 ನಿಮಿಷಗಳ ಕಾಲ ವಿವಿಧ ಆಸನಗಳನ್ನು ಮಾಡಿದರು.
ಆಯುಷ್ ಇಲಾಖೆಯ ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಣೇಶ ಕಬಾಡಿ ಸ್ವಾಗತಿಸಿದರು. ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಪ್ರಭಾರ ಅಧಿಕಾರಿ ಎಸ್.ಜಿ. ಭಾವಿಕಟ್ಟಿ ವಂದಿಸಿದರು. ಯೋಗ ತರಬೇತಿದಾರ ಜಗದೀಶ ಮಳಗಿ ಅವರು ಯೋಗ ಪ್ರದರ್ಶನ ನಡೆಸಿ ಕೊಟ್ಟರು. ಆಯುಷ್ ಇಲಾಖೆಯ ಡಾ.ಅಮೃತಾ ಪಾಸ್ತೆ ಕಾರ್ಯಕ್ರಮ ನಿರೂಪಿಸಿದರು.