ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ
ಧಾರವಾಡ,ಜೂ22: ನಿಗಧಿತ ಅವಧಿಯೊಳಗೆ ಸರಕಾರದ ಇಲಾಖೆಗಳ ಎಲ್ಲ ಕಾರ್ಯಕ್ರಮಗಳು ಪೂರ್ಣಗೊಳ್ಳಬೇಕು. ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ, ಹೆಚ್ಚುವರಿ ವೆಚ್ಚ, ಅವೈಜ್ಞಾನಿಕವಾಗಿ ಅನುಷ್ಠಾನ ಆಗದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಧಾರವಾಡ ಜಿಲ್ಲಾ ಪಂಚಾಯತ ಆಡಳಿತಾಧಿಕಾರಿಗಳೂ ಆಗಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ದೀಪಾ ಚೋಳನ್ ಅವರು ತಿಳಿಸಿದರು.
ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮತ್ತು ಜಿಲ್ಲಾ ಮಟ್ಟದ ಎಲ್ಲ ಇಲಾಖೆ, ನಿಗಮ,ಮಂಡಳಿಗಳ ಅಧಿಕಾರಿಗಳ ಸಭೆ ಜರುಗಿಸಿ, ಕಾರ್ಯಕ್ರಮಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ, ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳನ್ನು ನಿಯಮಾನುಸಾರ ಮಾಡಿ, ನಿಗದಿಪಡಿಸಿದ ಅನುದಾನ ಬಳಸಿ ಎಂದು ಅವರು ಹೇಳಿದರು.
ಇಲಾಖೆಗಳಿಗೆ ಹಂಚಿಕೆ ಆಗಿರುವ ಅನುದಾನ ಲ್ಯಾಪ್ಸ್ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹಂಚಿಕೆಯಾದ ಅನುದಾನವನ್ನು ಪೂರ್ಣವಾಗಿ ಬಳಸುವ ಮೂಲಕ ನೀಡಿರುವ ಗುರಿಯೊಂದಿಗೆ, ಗುಣಮಟ್ಟದ ಅಭಿವೃದ್ಧಿ ಸಾಧಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದರು. ಮುಂಗಾರು ಮಳೆ ಪ್ರಾರಂಭವಾಗಿದೆ. ಕೆರೆ, ಹಳ್ಳಗಳ ಲ್ಲಿನ ನೀರಿನ ಹರಿವಿನ ಬಗ್ಗೆ ಸ್ಥಳೀಯ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ನಿಗಾವಹಿಸಬೇಕು. ಪ್ರವಾಹದಿಂದ ಅಥವಾ ಕೆರೆಗಳ ಒಡ್ಡು ಒಡೆದು ಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮಮಟ್ಟದಿಂದ ಹಿಡಿದು ಹೋಬಳಿ, ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಜನರ ಸಮಸ್ಯೆಗಳಿಗಳನ್ನು ಪರಿಹರಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕಾಲಕಳೆಯದೇ, ಗ್ರಾಮ ಭೇಟಿ ನೀಡಿ, ತಮ್ಮ ಇಲಾಖೆಯ ಕಾರ್ಯಕ್ರಮ, ಯೋಜನೆಗಳ ಕುರಿತು ಜನರ ದೂರು, ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕು. ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಎಲ್ಲ ಅಹವಾಲುಗಳನ್ನು ಶೀಘ್ರ ಪರಿಶೀಲಿಸಿ, ಇತ್ಯರ್ಥಪಡಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರಕಾರದ ಮಹತ್ವಾಕಾಂಕ್ಷಿ, ಜನಪರವಾದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಂತೆ ಕ್ರಮವಹಿಸಬೇಕು. ಅರ್ಹ ಪ್ರತಿ ಫಲಾನುಭವಿಗೆ ಯೋಜನಗಳ ಲಾಭ ಲಭಿಸಬೇಕು. ಸರಕಾರದ ಆಶಯದಂತೆ ಸಮೃದ್ಧ, ಸಮಗ್ರ ರಾಜ್ಯದ ಅಭಿವೃದ್ಧಿಗಾಗಿ ಎಲ್ಲ ಇಲಾಖೆಗಳು, ತಮಗೆ ನೀಡಿದ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ಅನುಷ್ಠಾನಗೊಳಿಸಬೇಕೆಂದು ದೀಪಾ ಚೋಳನ್ ಹೇಳಿದರು.
ಸಭೆಯಲ್ಲಿ ಶಾಲಾ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಆಹಾರ, ಕುಡಿಯುವ ನೀರು ಮತ್ತು ನೈರ್ಮಲ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಲೋಕೊಪಯೋಗಿ ಸೇರಿದಂತೆ ಪ್ರಮುಖ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳ ಕಾರ್ಯವೈಖರಿಯನ್ನು ನಿರಂತರವಾಗಿ ಪರಿಶೀಲಿಸಿ, ನಿಗದಿತ ಆರ್ಥಿಕ ಮತ್ತು ಭೌತಿಕ ಗುರಿ ಸಾಧನೆಗೆ ಕ್ರಮವಹಿಸಲಾಗಿದೆ. ಕೆರೆಗಳ ಸಮೀಕ್ಷೆ ಮಾಡಲಾಗಿದ್ದು, ಸಮೀಕ್ಷೆ ಮಾಡಿ, ಅಳತೆ ಗುರುತು ಮಾಡಿರುವ ಕೆಲವು ಕೆರೆಗಳಲ್ಲಿ ಮತ್ತೇ ಕೆಲವರು ಒತ್ತುವರಿ ಮಾಡುತ್ತಿದ್ದಾರೆ. ಇದನ್ನು ಲ್ಯಾಂಡ್ ಬಿಟ್ ವ್ಯವಸ್ಥೆಗೆ ಅಳವಡಿಸಿ, ಪ್ರತಿ ಮೂರು ತಿಂಗಳಿಗೆ ಆಯಾ ಗ್ರಾಮ ಆಡಳಿತ ಅಧಿಕಾರಿಗಳು ಕೇರೆಗೆ ಭೇಟಿ ನೀಡಿ, ವರದಿ ಕೊಡುವಂತೆ ನಿರ್ದೇಶಿಸಲಾಗಿದೆ. ಸಿಎಸ್‍ಆರ್ ನಿಧಿಯಲ್ಲಿ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ಕೊಡಲು ನಿರ್ಧರಿಸಿ, ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.