ಮನಸ್ಸು-ದೇಹ ಸದೃಢಗೊಳ್ಳಲು ಯೋಗ ಅವಶ್ಯ
ಚನ್ನಮ್ಮನ ಕಿತ್ತೂರು,ಜೂ 22: ನಮ್ಮ ಮನಸ್ಸು ಹಾಗೂ ದೇಹ ಸೃಢಗೊಳ್ಳಲು, ನಮ್ಮ ಮನಸ್ಸನ್ನು ನಮ್ಮ ಹತೋಟಿಯಲ್ಲಿಡಲು ಯೋಗ ಅವಶ್ಯಕ ಉಪಾಯವಾಗಿದೆ ಎಂದು ಯೋಗ ಗುರು ಸೌಮ್ಯಾ ರಾಘವೇಂದ್ರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಕಿ.ನಾ.ವಿ.ವ.ಸಂಘದ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ, ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಯುಥ್ ರೆಡ್‍ಕ್ರಾಸ್ ವತಿಯಿಂದ ನಡೆದ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು ಯೋಗ ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ರೂಡಿಯಲ್ಲಿದೆ. ಇಂದಿನ ವೈಜ್ಞಾನಿಕ ಯಾಂತ್ರಿಕ ಯುಗದಲ್ಲಿ ನಾವು ಇಂದು ನಮ್ಮ ಮನಸ್ಸಿನ ಹತೋಟಿಯನ್ನು ಕಳೆದುಕೊಂಡಿದ್ದು ನಾವು ಮಾನಸಿಕವಾಗಿ ಬಳಲಿಹೋಗುತ್ತಿದ್ದೆವೆ. ಈ ಒಂದು ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಲು ಯೋಗ ಒಂದು ಮಾರ್ಗ. ಪ್ರತಿದಿನ ಕೆಲವು ಗಂಟೆ ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದೆಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕಿನಾವಿವ ಸಂಘದ ಚೇರಮನ್ನರಾದ ಜಗದೀಶ ವಸ್ತ್ರದ, ಯೋಗದಿಂದ ಮಾನಸಿಕ ಮತ್ತು ಭಾವನಾತ್ಮಕ ಪ್ರಯೋಜನಗಳೆಂದರೆ ಒತ್ತಡ ಕಡಿತ, ವರ್ಧಿತ ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸ್ಥಿರತೆ, ಧ್ಯಾನದ ಮೂಲಕ ಆಂತರಿಕ ಶಾಂತಿ. ಯೋಗವು ಸ್ವಯಂ-ಅರಿವನ್ನು ಬೆಳೆಸುತ್ತದೆ, ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.
ಎನ್.ಸಿ.ಸಿ ಅಧಿಕಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಎಮ್.ಜಿ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಇದು ದೇಹ, ಮನಸ್ಸು ಮತ್ತು ಆತ್ಮಕ್ಕೆ ಸಮಗ್ರ ವಿಧಾನವಾಗಿ ಸಾಕ್ಷಿಯಾಗಿದೆ ಎಂದರು.
ಯೋಗ ತರಬೇತಿ ಕುರಿತು ರೇಂಜರ್ ಕುಮಾರಿ ಚೈತ್ರಾ ಪಠಾಣೆ ಮಾತನಾಡಿ ಈ ತರಬೇತಿಯಲ್ಲಿ ಪಡೆದ ಯೋಗದ ವಿಧಾನಗಳಿಂದ ನಮ್ಮ ಮನಸ್ಸು ಕೇಂದ್ರಿಕರಿಸಲು ಸಹಕಾರಿಯಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಹತ್ತು ದಿನಗಳವರೆಗೆ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕಿ ಸೌಮ್ಯಾ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ಕಿನಾವಿವ ಸಂಘದ ಉಪಾಧ್ಯಕ್ಷರಾದ ಅರುಣಕುಮಾರ ಬಿಕ್ಕಣ್ಣವರ, ಎನ್.ಎಸ್.ಎಸ್ ಅಧಿಕಾರಿ ನಾಗರಾಜ ಎಚ್.ಕೆ, ರೇಂಜರ್ಸ್ ಲೀಡರ್ ಪಿ.ಎಲ್.ದಾಮೋಣೆ, ಐ.ಕ್ಯೂ.ಎ.ಸಿ ಆರ್.ಬಿ.ಹವಿನಾಳೆ, ಪದವಿ ಪೂರ್ವ ಪ್ರಾಚಾರ್ಯ ಎಮ್.ಎಸ್.ಪಾಟೀಲ, ವಿಜಯವಾಣಿ ವರದಿಗಾರ ನಾಗರಾಜ ಜೋರಾಪೂರ, ವಿದ್ಯಾರ್ಥಿ ಒಕ್ಕೂಟದ ಚೇರಮನ್ನರಾದ ಡಾ. ಕೆ. ಆರ್. ಮೆಳವಂಕಿ ಇತರರು ವೇದಿಕೆಯಲ್ಲಿದ್ದರು. ಕುಮಾರಿ ಅನು ಮೆಟ್ಟಿನ ಪ್ರಾರ್ಥಿಸಿದರು, ಪ್ರಾಚಾರ್ಯ ಡಾ. ಜಿ. ಕೆ. ಭೂಮನಗೌಡರ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು, ರೋವರ್ಸ್ ಲೀಡರ್ ಆನಂದ ಕರೆಪ್ಪನವರ ವಂದಿಸಿದರು, ಪ್ರಕಾಶ ಹೊನ್ನಪ್ಪನವರ ಕಾರ್ಯಕ್ರಮ ನಿರೂಪಿಸಿದರು.