ನರೇಗಾ ಯೋಜನೆಯಡಿ ಜಾಬ್‍ಕಾರ್ಡ್ ಸಮೀಕ್ಷೆ ಕಾರ್ಯ
ಬ್ಯಾಡಗಿ,ಜೂ22: ತಾಲೂಕಿನ 21 ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆಯಡಿ ಸಕ್ರಿಯವಲ್ಲದ ಜಾಬ್ ಕಾರ್ಡ್’ಗಳನ್ನು ಸಕ್ರಿಯಗೊಳಿಸಲು ಮತ್ತು ಯೋಜನೆಯಡಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿಸಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ನರೇಗಾ ಯೋಜನೆಯ ತಾಲೂಕಾ ಐಇಸಿ ಸಂಯೋಜಕ ಅಕ್ಷಯ ದೇಶಪಾಂಡೆ ಹೇಳಿದರು.
ತಾಲೂಕಿನ ಮೋಟೆಬೆನ್ನೂರ, ಹೆಡಿಗ್ಗೊಂಡ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆಯ ಕುರಿತು ಮನೆಮನೆಗೆ ಭೇಟಿ ನೀಡಿ ಮಾಹಿತಿ ಒದಗಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಈಗಾಗಲೇ ನರೇಗಾ ಯೋಜನೆಯ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಜಾಬ್ ಕಾರ್ಡ್ ನೋಂದಣಿಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ನಿಗದಿತ ನಮೂನೆಯ ಮೂಲಕ, ಸರಳ ಕಾಗದದ ಮೇಲೆ ಅಥವಾ ಮೌಖಿಕವಾಗಿ ಒಂದು ಘಟಕವಾಗಿ ಕುಟುಂಬವು ಈ ಯೋಜನೆಯಡಿ ನೋಂದಾಯಿಸಲು ಅರ್ಹವಾಗಿದೆ. ಎಲ್ಲಾ ಅರ್ಜಿದಾರರು ಸ್ಥಳೀಯ ವಾಸಸ್ಥಳವನ್ನು ಹೊಂದಿರಬೇಕು. ಒಂಟಿಯಾಗಿ ವಾಸಿಸುವ ಯಾವುದೇ ಒಂಟಿ ಮಹಿಳೆಯರು ಕೂಡ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನೋಂದಣಿ ಮತ್ತು ಪರಿಶೀಲನೆ ಪ್ರಕ್ರಿಯೆಯಲ್ಲಿ ಯಾವುದೇ ತಾರತಮ್ಯ ನೀತಿಯನ್ನು ಅನುಸರಿಸಲಾಗುವುದಿಲ್ಲ. ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಉದ್ಯೋಗಿಗಳಿಗೆ ಅವರ ಜಾಬ್ ಕಾರ್ಡ್‍ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಸಮೀಕ್ಷಾ ಕಾರ್ಯದಲ್ಲಿ ಬಿಎಫ್’ಟಿ ಕರೇಗೌಡ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.