ಯೋಗ ದಿನಾಚರಣೆ
ಬಾದಾಮಿ,ಜೂ22: ತಾಲೂಕಿನ ಪಟ್ಟದಕಲ್ಲು ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಬಾಚಿನಗುಡ್ಡ ಗ್ರಾಮದ ಅಮೃತ ಸರೋವರ ತಟದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಗ ದಿನಾಚರಣೆಯನ್ನು ನರೇಗಾ ಯೋಜನೆಯ ಅಡಿಯಲ್ಲಿ ಬರುವ ಕೂಲಿ ಕಾರ್ಮಿಕರು ಯೋಗ ಮಾಡುವ ಮೂಲಕ ಆಚರಿಸಲಾಯಿತು.
ಯೋಗದ ಕುರಿತು ಶಿಕ್ಷಕ ಬಿ.ಎನ್.ಬಸರಿ ಮಾತನಾಡಿದರು. ಯುವ ಮುಖಂಡ ಕುಮಾರ ಯಡಪ್ಪನವರ ಮಾತನಾಡಿ ಭಾರತದ ಪ್ರಾಚೀನ ಕಾಲದಿಂದ ಋಷಿಮುನಿಗಳು ಯೋಗವನ್ನು ಮಾಡುತ್ತಾ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಇರುತ್ತಿದ್ದರು, ಅದರಂತೆ ಇಂದಿನ ಪೀಳಿಗೆಯಲ್ಲಿ ಮನುಷ್ಯ ತನ್ನ ನಿರಂತರ ಮಾನಸಿಕ ಒತ್ತಡ ದಿಂದ ಜೀವನಸಾಗಿಸುತ್ತಿದ್ದು ಇದರಿಂದ ರಕ್ತದೊತ್ತಡ, ಸಕ್ಕರೆ ಖಾಯಿಲೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಹಾಗೂ ಇದನ್ನು ಹೋಗಲಾಡಿಸಬೇಕೆಂದರೆ ಯೋಗ ಅತ್ಯಂತ ಮಹತ್ವದ್ದಾಗಿದೆ. ಆದಕಾರಣ “ಯೋಗ ಬಲ್ಲವನಿಗೆ ರೋಗವಿಲ್ಲ” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪಂಚಯ್ಯ ಮಲ್ಲಾಪುರ, ರಂಗಪ್ಪ ಚೌಡಪ್ಪನವರ ಭಾಗವಸಿದ್ದರು ಹಾಗು ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಪರಶು ದಳವಾಯಿ, ಬಸವರಾಜ ಹೇರೂರು ಹಾಗೂ ನರೇಗಾ ಯೋಜನೆಯ ಕೂಲಿ ಕಾರ್ಮಿಕರು ಭಾಗವಹಿಸಿದ್ದರು. ಪಿಡಿಒ ಆಸೆಂಗೆಪ್ಪ ಸ್ವಾಗತಿಸಿದರು.