ಜನಸ್ಪಂದನ ಕಾರ್ಯಕ್ರಮ:137 ಅರ್ಜಿಗಳು ಸ್ವೀಕೃತಿ
ಬಾದಾಮಿ,ಜೂ22: ಸಾರ್ವಜನಿಕರಿಂದ ಬಂದ ಅಹವಾಲುಗಳಿಗೆ ತುರ್ತು ವಿಲೇವಾರಿಗೆ ಕ್ರಮಕೈಗೊಳ್ಳುವಂತೆ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ನಗರದ ತಾ.ಪಂ. ಸಭಾಭವನದಲ್ಲಿ ಹಮ್ಮಿಕೊಂಡ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು ಸಾರ್ವಜನಿಕರು ಹೊತ್ತು ತಂದ ಕುಂದು-ಕೊರತೆ ಹಾಗೂ ಅಹವಾಲುಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಸಾಧ್ಯವಾದಷ್ಟು ಬೇಗನೇ ಇತ್ಯರ್ಥಗೊಳಿಸಿ, ಅಧಿಕಾರಿ ಹಾಗೂ ಇಲಾಖೆಯ ಮೇಲೆ ವಿಶ್ವಾಸ ಮೂಡಿಸುವ ಕಾರ್ಯವಾಗಬೇಕು. ಈಗಾಗಲೇ ಮೊದಲ ಹಂತದಲ್ಲಿ ಜನಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಿದ್ದು, ಈಗಲೂ ಸಹ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಜನಸ್ಪಂದನ ಸರಕಾರದ ಮಹತ್ವದ ಕಾರ್ಯಕ್ರಮವಾಗಿದ್ದು, ತಾಲೂಕಾ ಹಂತದಲ್ಲಿ ಬಂದ ಅರ್ಜಿಗಳನ್ನು ರಾಜ್ಯ ಮಟ್ಟದಲ್ಲಿ ಮುಖ್ಯ ಮಂತ್ರಿಗಳ ಕಾರ್ಯಾಲಯದಿಂದ ನಿಯಂತ್ರಣ ಮಾಡಲಾಗುತ್ತಿದ್ದು, ಅರ್ಜಿಗಳಿಗೆ ತುರ್ತಾಗಿ ಇತ್ಯರ್ಥಗೊಳಿಸಲು ಹೇಳಿದರು.
ನಂತರ ನಡೆದ ಸಾರ್ವಜನಿರ ಅಹವಾಲು ಸ್ವೀಕಾರದಲ್ಲಿ ಒಟ್ಟು 137 ಅರ್ಜಿಗಳು ಸ್ವೀಕೃತೊಂಡಿದ್ದು, ಅದರಲ್ಲಿ ಮುಖ್ಯವಾಗಿ ಕಂದಾಯ, ಶಿಕ್ಷಣ, ಕೆಇಬಿ, ಗ್ರಾ.ಪಂ, ಕುಡಿಯುವ ನೀರಿನ ಸಮಸ್ಯೆ, ವಸತಿ, ಶಾಲಾ ಕಟ್ಟಡ, ಹೆಸ್ಕಾಂ, ಸಹಕಾರ, ಗ್ರಾ.ಪಂ, ಶಿಕ್ಷಣ ಇಲಾಖೆ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ 137 ಅರ್ಜಿಗಳು ಸ್ವೀಕೃತಗೊಂಡವು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಬಾದಾಮಿ ತಹಶೀಲ್ದಾರ ಜೆ.ಬಿ.ಮಜ್ಜಗಿ, ಗುಳೇದಗುಡ್ಡ ತಹಶೀಲದಾರ ಮಂಗಳಾ ಎಂ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ ಸೇರಿದಂತೆ ಜಿಲ್ಲಾ ಮತ್ತು ತಾಲೂಕಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.