ಮಾನಸಿಕ ಸದೃಢತೆ ಹಾಗೂ ಒತ್ತಡ ಮುಕ್ತ ಜೀವನಕ್ಕೆ ಯೋಗ ಸಹಕಾರಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಜೂ.21: ಯೋಗ ಮನುಷ್ಯನಿಗೆ ದೈಹಿಕ ಶಕ್ತಿ ಹಾಗೂ ಚೈತನ್ಯ ತುಂಬುವದರ ಜೊತೆಗೆ ಮಾನಸಿಕವಾಗಿಯೂ ಸಹ ಸದೃಡರನ್ನಾಗಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ನಿತ್ಯದ ಬದುಕಿನಲ್ಲಿ ಯುವ ಜನರಿಗೆ ಮಾನಸಿಕ ಶಕ್ತಿ ಅವಶ್ಯಕವಾಗಿದೆ. ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ‌ ಬರುವ ಅನೇಕ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸದೃಢರಾಗಿರಲು ಹಾಗೂ ಒತ್ತಡ ಮುಕ್ತ ಜೀವನಕ್ಕೆ ಯೋಗ ಸಹಕಾರಿಯಾಗಿದೆ ಎಂದು ಹೇಳಿದರು‌.ಯುವಜನರು ಒತ್ತಡದಿಂದ ಹೃದಯಾಘಾತಕ್ಕೆ ಒಳಗಾಗುವುದು. ಜೀವನದ ಕಠಿಣ ಸಮಯ ಎದುರಿಸಲಾಗದೆ ಆತ್ಮಹತ್ಯೆ ಅಂತಹ ಕೃತ್ಯಗಳಿಗೆ ಮುಂದಾಗುವುದನ್ನು ದಿನ ನಿತ್ಯ ಕಾಣುತ್ತಿದ್ದೇವೆ. ಬಹಳಷ್ಟು ಯುವ ಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.  ಯೋಗದಿಂದ ಇವೆಲ್ಲವೂಗಳಿಗೂ ಪರಿಹಾರ ದೊರಕಲಿದೆ ಎಂದರು. ಜೀವನದಲ್ಲಿ ಸಕಾರಾತ್ಮಕ ಚಿಂತನೆ ಹಾಗೂ ಸದೃಢ ಮನೋಭಾವ ಹೊಂದಲು ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ.  ಯುವಜನತೆಯಲ್ಲಿ ಕ್ರೋಧ ಮತ್ಸರ, ದ್ವೇಷ, ಸಮಾಜ ಘಾತುಕ ಮನೋಭಾವ ಮೂಡದಂತೆ ಯೋಗಾಭ್ಯಾಸ ತಡೆಯುತ್ತದೆ. ಇದರಿಂದ ಯುವ ಜನತೆಗೆ ಲಾಭವಾಗುತ್ತದೆ ಎಂದು ಕೆ.ಎಸ್.ನವೀನ್ ಅಭಿಪ್ರಾಯಪಟ್ಟರು.