ಮನಸ್ಸು ಹತೋಟಿಯಲ್ಲಿರಲು ಯೋಗ ಬಹು ಮುಖ್ಯ ಸಾಧನ; ತರಳಬಾಳು ಶ್ರೀ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೧; ಬಂಧನಕ್ಕೂ ಮುಕ್ತಿಗೂ ಮನಸ್ಸೇ ಮೂಲ‌ಕಾರಣ. ಮನಸ್ಸು ಹತೋಟಿಯಲ್ಲಿರ ಬೇಕಾದರೆ ಯೋಗ ಬಹು ಮುಖ್ಯ ಎಂದು ಸಿರಿಗೆರೆ ತರಳಬಾಳು ಶ್ರೀಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ,ಜಿ.ಪಂ,ಜಿಲ್ಲಾ ಆಯುಷ್ ಇಲಾಖೆ,ಮಹಾನಗರ ಪಾಲಿಕೆ,ಪ್ರಜಾಪಿತ ಬ್ರಹ್ಮಕುಮಾರಿ,ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ,ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ನಡೆದ ೧೦ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಯೋಗದ ಮಹತ್ವ ದ ಬಗ್ಗೆ ತಿಳಿಸಿದರು.ಮನುಷ್ಯನ ಮನಸ್ಸು ನೀರಿದ್ದಂತೆ.ಸರೋವರಕ್ಕೆ ಕಲ್ಲು ಎಸೆದರೆ ತರಂಗಗಳು ಉಂಟಾಗುತ್ತದೆ.ಹಾಗೇ ಮಾನವನ ಮನಸ್ಸಿಗೆ ದೈನಂದಿನ ಜೀವನದಲ್ಲಿ ಕಷ್ಟಗಳು ತಾಕುತ್ತವೆ ಆದರೆ ಅದನ್ನೆಲ್ಲಾ ನಿಭಾಯಿಸಬೇಕು ಅದಕ್ಕೆ ಸದೃಢ ಮನಸ್ಸು ಬೇಕು ಎಂದರು.   ಮನಸ್ಸು ಹತೋಟಿಯಲ್ಲಿದ್ದರೆ ಸಂತೋಷದಿಂದ‌ ಇರಲು ಸಾಧ್ಯ.ಮನಸ್ಸು ನಮ್ಮನ್ನು ಆಟವಾಡಿಸಲು‌ ಬಿಡಬಾರದು. ಮನಸ್ಸನ್ನು ನಿಯಂತ್ರಣದಲ್ಲಿ ಹಾಗೂ ಹತೋಟಿಯಲ್ಲಿಡುವುದು ಯೋಗದ ಉದ್ದೇಶ ಎಂದರು.ನಿತ್ಯ ಪ್ರಾರ್ಥನೆ, ಧ್ಯಾನ ಮಾಡುವುದು ಒಳ್ಳೆಯದು.ಮಾನವ ದಾರಿ ತಪ್ಪಲು ಕಾರಣ ಮನಸ್ಸು ಹತೋಟಿಯಲ್ಲಿ‌ ಇಲ್ಲದಿರುವುದು. ಯೋಗದಿನಾಚರಣೆ ಹಾಗೂ ಯೋಗ ಅಭ್ಯಾಸ ಒಂದುದಿನದ ಆಚರಣೆ ಮಾತ್ರವಲ್ಲ   ದಿನನಿತ್ಯದ ಅಭ್ಯಾಸವಾಗಿರಬೇಕು ಎಂದು ತಿಳಿಸಿದರು.ಮನಸ್ಸಿಗೆ ದುಃಖವಾದಾಗ ವೈರಾಗ್ಯ ಎನ್ನುತ್ತಾರೆ.ವೈರಾಗ್ಯ ಎಂದರೆ ಕಾಡಿಗೆ ಹೋಗುವುದಲ್ಲ ಮನಸ್ಸನ್ನು ಕಸಿಗೊಳಿಸುವುದು. ಶರೀರ ಪಳಗಿಸುವುದು ಮನಸ್ಸು ಪಳಗಿಸುವುದು ಇದು  ಯೋಗದಿಂದ ಸಾಧ್ಯ ಹಾಗೂ ಯೋಗದ ಮುಖ್ಯ ಗುರಿ. ಯೋಗಾಸನದಲ್ಲಿ ದೃಢತೆ ಇರಬೇಕು ಹಾಗೂ ಆನಂದ ಇರಬೇಕು.ಕಷ್ಟಪಟ್ಟು ಮಾಡುವುದು ಸರಿಯಲ್ಲ.