ಯೋಗ ದೇಹ-ಮನಸ್ಸಿನ ಸೇತುವೆ: ಡಾ. ಪರಮೇಶ್
ತುಮಕೂರು, ಜೂ. ೨೨- ಯೋಗವು ದೇಹ ಹಾಗೂ ಮನಸ್ಸುಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಸಲಿದ್ದು, ದಿನಂಪ್ರತಿ ಯೋಗ ರೋಗಗಳಿಂದ ದೂರವಿಡುವುದಷ್ಟೇ ಅಲ್ಲದೆ ಮಾನಸಿಕ ನೆಮ್ಮದಿಗೂ ಕಾರಣವಾಗುತ್ತದೆ ಎಂದು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ. ಎಸ್. ಪರಮೇಶ್ ತಿಳಿಸಿದರು.
ನಗರದ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ನಮ್ಮ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ದಿನವಿಡೀ ದುಡಿಯುತ್ತೇವೆ. ಆದರೆ ಮಾನಸಿಕ ಶಕ್ತಿ, ದೈಹಿಕ ಶಕ್ತಿ ಹೆಚ್ಚಿಸಿಕೊಳ್ಳಲು ದಿನಕ್ಕೆ ೨೦ ನಿಮಿಷಗಳನ್ನು ಯೋಗಕ್ಕಾಗಿ ಮೀಸಲಿಡದಿರುವುದು ವಿಪರ್ಯಾಸ. ಯೋಗ ನಿತ್ಯ ಜೀವನದಲ್ಲಿ ಅನಿವಾರ್ಯವಾಗಬೇಕೇ ವಿನಃ ಆಯ್ಕೆಯಾಗಬಾರದು ಎಂದರು.
ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾದ ಡಾ. ಶಾಲಿನಿ ಮಾತನಾಡಿ, ಉತ್ತಮ ಜೀವನ ಶೈಲಿಯೇ ಯಶಸ್ವಿ ಬದುಕಿನ ಕೀಲಿ ಕೈ. ಹಾಗಾಗಿ ವೈದ್ಯಕೀಯ ವಿದ್ಯಾರ್ಥಿಗಳು ಯೋಗವನ್ನು ಬದುಕಿನ ಭಾಗವಾಗಿಸಿಕೊಂಡರೆ ಸುಸ್ಥಿರ ಮನಸ್ಸು ಹಾಗೂ ದೈಹಿಕ ಶಕ್ತಿಯ ಜತೆಗೆ ಪರಿಪೂರ್ಣ ಮಾನಸಿಕ ಆರೋಗ್ಯ ನಿಮ್ಮದಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಯೋಗಪಟುಗಳಾದ ರಾಜನ್ ಹಾಗೂ ಚಿರಂತನ್ ಯೋಗ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ವಿಭಾಗದ ನಿರ್ದೇಶಕರಾದ ಡಾ. ಭಾನುಪ್ರಕಾಶ್, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ. ವೀಣಾ ಪರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.