25 ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ ಶಿವಮೊಗ್ಗ ನಗರ ವ್ಯಾಪ್ತಿ! : ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ!!
ಶಿವಮೊಗ್ಗ, ಜ. 21;  ರಾಷ್ಟ್ರ – ರಾಜ್ಯದಲ್ಲಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಎರಡನೇ ಹಂತದ ನಗರಗಳಲ್ಲೊಂದಾಗಿರುವ, ಶಿವಮೊಗ್ಗ ನಗರ ವ್ಯಾಪ್ತಿ ಬರೋಬ್ಬರಿ 25 ವರ್ಷಗಳಿಂದ ಪರಿಷ್ಕರಣೆಯೇ ಆಗಿಲ್ಲ..!ಈ ವಿಷಯದ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ, ದಿವ್ಯ ನಿರ್ಲಕ್ಷ್ಯ, ಯೋಜನಾಬದ್ಧ ನಗರದ ಬೆಳವಣಿಗೆಯ ಬಗ್ಗೆ ಆಸಕ್ತಿಯಿಲ್ಲದಿರುವುದೇ ಮುಖ್ಯ ಕಾರಣವಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತವೆ.ಜನಸಂಖ್ಯೆ ಹಾಗೂ ಪ್ರದೇಶಗಳ ಅಭಿವೃದ್ದಿಗೆ ಅನುಗುಣವಾಗಿ, ಕಾಲಕಾಲಕ್ಕೆ ನಿಯಮಿತವಾಗಿ ನಗರ – ಪಟ್ಟಣಗಳ ವ್ಯಾಪ್ತಿ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ ಶಿವಮೊಗ್ಗ ನಗರದ ವಿಷಯದಲ್ಲಿ ಮಾತ್ರ ಇವ್ಯಾವುದು ಇಲ್ಲವಾಗಿದೆ.ಜಿಲ್ಲೆಯವರೇ ಸಿಎಂ, ಡಿಸಿಎಂ ಸೇರಿದಂತೆ ರಾಜ್ಯ ಸರ್ಕಾರದ ಪ್ರಭಾವಿ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ ಹೊರತಾಗಿಯೂ ಪ್ರಮುಖ ಆಡಳಿತಾತ್ಮಕ ವಿಷಯವಾದ ನಗರ ವ್ಯಾಪ್ತಿ ಪರಿಷ್ಕರಣೆಯ ಗೋಜಿಗೆ ಹೋಗದಿರುವುದು ಸಖೇದಾಶ್ಚರ್ಯ ಸಂಗತಿಯಾಗಿದೆ. ಕಾರಣವೇನೆಂಬುವುದು ಮಾತ್ರ ಸ್ಪಷ್ಟವಾಗುತ್ತಿಲ್ಲವಾಗಿದೆ. ಶಿವಮೊಗ್ಗ ನಗರದಂಚಿನಲ್ಲಿರುವ ಅಬ್ಬಲಗೆರೆ, ಕೋಟೆಗಂಗೂರು, ನಿಧಿಗೆ, ಮುದ್ದಿನಕೊಪ್ಪ ಸೇರಿದಂತೆ ಕೆಲ ಗ್ರಾಮ ಪಂಚಾಯ್ತಿ ಅಧೀನಗಳಲ್ಲಿ ಕಳೆದ 15 ವರ್ಷಗಳ ಅವಧಿಯಲ್ಲಿ ಭಾರೀ ದೊಡ್ಡ ಸಂಖ್ಯೆಯ ಬಡಾವಣೆಗಳು ಅಭಿವೃದ್ದಿಯಾಗಿವೆ. ಸಾವಿರಾರು ಜನರು ವಾಸಿಸುತ್ತಿದ್ದಾರೆ. ಆದರೆ ಬಡಾವಣೆಗಳ ನಿರ್ವಹಣೆಗೆ ಅಗತ್ಯವಾದ ಸೌಲಭ್ಯ ಗ್ರಾಪಂ ಆಡಳಿತಗಳಲ್ಲಿ ಇಲ್ಲವಾಗಿದೆ.ಒಳಚರಂಡಿ (ಯುಜಿಡಿ) ನಿರ್ವಹಣೆ, ಘನತ್ಯಾಜ್ಯ ವಿಲೇವಾರಿ, ಚರಂಡಿ, ರಸ್ತೆಗಳ ನಿರ್ಮಾಣ, ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಆಗುತ್ತಿಲ್ಲ. ಸ್ಥಳೀಯ ನಾಗರೀಕರಂತೂ ತೀವ್ರ ತೊಂದರೆ ಎದುರಿಸುವಂತಾಗಿದೆ. ಗ್ರಾಪಂ ಆಡಳಿತಗಳಿಗೂ ಇಂತಹ ಬಡಾವಣೆಗಳು ಹೊರೆಯಾಗಿ ಪರಿಣಮಿಸುತ್ತಿವೆ. ಆಡಳಿತದ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ.  ನಗರದಂಚಿನ ಬಡಾವಣೆಗಳನ್ನು ಮಹಾನಗರ ಪಾಲಿಕೆಗೆ ಸೇರ್ಪಡೆಗೊಳಿಸಿ, ನಾಗರೀಕರಿಗೆ ಸಮರ್ಪಕ ಮೂಲಸೌಕರ್ಯ ಕಲ್ಪಿಸುವುದು ಆಡಳಿತ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗದಿರುವುದಕ್ಕೆ ಪ್ರಜ್ಞಾವಂತ ನಾಗರೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

