ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ
ಮಧುಗಿರಿ, ಜೂ. ೨೨- ರಾಜ್ಯ ಕಾಂಗ್ರೆಸ್ ಸರ್ಕಾರದ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ನಿರ್ಧಾರವನ್ನು ಖಂಡಿಸಿ ಬಿಜೆಪಿ ಮಧುಗಿರಿ ಮಂಡಲ ವತಿಯಿಂದ ಇಲ್ಲಿನ ತುಮಕೂರು ಗೇಟ್ ಬಳಿ ರಸ್ತೆ ತಡೆದು, ಟಿವಿವಿ ಪೆಟ್ರೋಲ್ ಬಂಕ್ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ನಂತರ ತಾಲ್ಲೂಕು ಕಚೇರಿಗೆ ಮೆರವಣಿಗೆ ಮೂಲಕ ಸಾಗಿ ತಹಶೀಲ್ದಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ತಮ್ಮ ಭಂಡತನವನ್ನು ತೊರೆದು ಬೆಲೆ ಏರಿಕೆಯ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷರಾದ ನಾಗೇಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವಿ.ಆರ್, ತೇಜಸ್ ಗೌಡ, ಬಿಜೆಪಿ ಪಕ್ಷದ ಹಿರಿಯ ಮುಖಂಡರುಗಳಾದ ನಾಗರಾಜಪ್ಪ, ಲಕ್ಷ್ಮಿಪತಿ, ಮಂಡಲ ಹಾಗೂ ಜಿಲ್ಲಾ ಹಂತದ ವಿವಿಧ ಪದಾಧಿಕಾರಿಗಳು, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.