ಯೋಗ ನಡಿಗೆ ಕಾರ್ಯಕ್ರಮ
ಮಧುಗಿರಿ, ಜೂ. ೨೨- ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ವಿಶ್ವ ಯೋಗ ದಿನಾಚರಣೆಯ ದಶಮಾನೋತ್ಸವದ ಅಂಗವಾಗಿ ಪಟ್ಟಣದಲ್ಲಿ ಸಾರ್ವಜನಿಕ ಜಾಗೃತಿ ಜಾಥಾ ಯೋಗ ನಡಿಗೆ ಕಾರ್ಯಕ್ರಮ ನಡೆಸಲಾಯಿತು.
ಪಟ್ಟಣದ ಸಂತೆ ಬೀದಿಯಲ್ಲಿರುವ ಯೋಗ ಮಂದಿರದಿಂದ ಆರಂಭವಾದ ಯೋಗ ನಡಿಗೆ ಸಂತೆ ಬೀದಿ, ಪುರಭವನ ರಸ್ತೆ, ಶ್ರೀ ಟಿ.ವಿ.ವಿ ವೃತ್ತ, ಗೌರಿಬಿದನೂರು ರಸ್ತೆ, ನೃಪತುಂಗ ವೃತ್ತ, ತಾಲ್ಲೂಕು ಆಡಳಿತ ಸೌಧ ರಸ್ತೆ, ಹೈಸ್ಕೂಲ್ ರಸ್ತೆ, ಡೂಂ ಲೈಟ್ ವೃತ್ತದಲ್ಲಿ ಮಾನವ ಸರಪಳಿ, ಶ್ರೀ ಪ್ರಸನ್ನ ಪಾರ್ವತಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ರಸ್ತೆ, ಶ್ರೀ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನ ರಸ್ತೆ, ದ್ವಿಪಥ ರಸ್ತೆ, ಅಂಬೇಡ್ಕರ್ ವೃತ್ತ ನಂತರ ಅಂಬೇಡ್ಕರ್ ಭವನಕ್ಕೆ ತಲುಪಿ ಮುಕ್ತಾಯಗೊಂಡಿತು.
ಯೋಗ ನಡಿಗೆಯಲ್ಲಿ ಸಾರ್ವಜನಿಕರಿಗೆ ಯೋಗದಿಂದಾಗುವ ಉಪಯೋಗದ ಬಗ್ಗೆ ಬಿತ್ತಿ ಪತ್ರದ ಮೂಲಕ ಅರಿವು ಮೂಡಿಸಲಾಯಿತು.
ಮಧುಗಿರಿ ಶಾಖೆಯ ಅಧ್ಯಕ್ಷ ಕೆ.ವಿ.ಮಂಜುನಾಥ್, ಖಜಾಂಚಿ ಡಾ.ಜಿ.ಕೆ. ಜಯರಾಂ, ತುಮಕೂರು ಜಿಲ್ಲಾ ಸಂಚಾಲಕ ಗೋಪಿನಾಥ್, ಎಲ್ಲಾ ಶಾಖೆಯ ಶಿಕ್ಷಕರುಗಳು, ಯೋಗಬಂಧುಗಳು ಪಾಲ್ಗೊಂಡಿದ್ದರು.