ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡಲು ಕರೆ
ತಿಪಟೂರು, ಜೂ. ೨೨- ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಲು ಸಂಕಲ್ಪತೊಡಬೇಕು ಎಂದು ಶಾಸಕ ಕೆ. ಷಡಕ್ಷರಿ ಕರೆ ನೀಡಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಮತ್ತು ಅರಣ್ಯ ಇಲಾಖೆ ಸಾಮಾಜಿಕ ವಲಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಸಿರು ಗ್ರಾಮ ಅಭಿಯಾನ ಯೋಜನೆ ಅಡಿಯಲ್ಲಿ ಬೆನ್ನಾಯಕನಹಳ್ಳಿಯ ಸರ್ಕಾರಿ ಹಿರಿಯ ಪಾಠಶಾಲಾ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಳೆಯ ಅಭಾವ ಮತ್ತು ಬರಗಾಲದಿಂದ ಪರಿಸರ ನಾಶವಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಸಾರ್ವಜನಿಕರು ಮನೆಗೊಂದು ಮರ, ಊರಿಗೊಂದು ವನ ಈ ಜಾಗೃತಿಯೊಂದಿಗೆ ಕಾಡು ಮತ್ತು ಪರಿಸರ ಉಳಿಸಿದರೆ ನಮ್ಮ ಮುಂದಿನ ತಲೆಮಾರಿಗೆ ಬಹಳ ಅನುಕೂಲವಾಗಲಿದೆ. ಇಲ್ಲವಾದಲ್ಲಿ ಮುಂದೊಂದು ದಿನ ನಮಗೆ ದೊಡ್ಡ ಆಘಾತವಾಗುವ ಮುನ್ಸೂಚನೆ ಬರಲಿದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕಡ್ಡಾಯವಾಗಿ ಪರಿಸರ ಸಂರಕ್ಷಣೆ ಮಾಡುವ ಸಂಕಲ್ಪ ಹೊಂದಬೇಕು. ಸಸಿಗಳನ್ನು ಬೆಳೆಸಿ ಪೋಷಿಸಿದರೆ ಸಸಿಗಳೇ ನಮ್ಮ ಮುಂದಿನ ಭವಿಷ್ಯದ ಜನರ ಉಸಿರಾಗುತ್ತವೆ ಎಂದರು.
ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಮಾತನಾಡಿ, ಅತಿಯಾದ ವಾಹನ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಧ್ಯವಾದಷ್ಟು ವಾಯು ಮಾಲಿನ್ಯ ರಹಿತ ವಾಹನಗಳನ್ನು ಬಳಸಿ ಮತ್ತು ನಗರದಲ್ಲಿ ವಾಸವಿರುವ ಸಾರ್ವಜನಿಕರು ತಮ್ಮ ಮನೆಗಳ ಮುಂದೆ ಒಂದು ಗಿಡವನ್ನು ನೆಟ್ಟು ಪೋಷಿಸಿ, ನಗರವನ್ನು ಮತ್ತು ತಮ್ಮ ಸುತ್ತಮುತ್ತಲ ಪರಿಸರವನ್ನು ಸಂರಕ್ಷಿಸಬೇಕು. ಇಲ್ಲವಾದರೆ ಉಸಿರಾಡಲು ಶುದ್ದ ಗಾಳಿಯ ಕೊರತೆ ಉಂಟಾಗುತ್ತಿದೆ ಎಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷ ಬಿ.ಬಿ. ಬಸವರಾಜ್ ಮಾತನಾಡಿ, ಪರಿಸರ ನಾಶದಿಂದ ಅಂತರ್ಜಲ ಕುಸಿತಗೊಂಡಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿರುವುದು ಕಾಡನ್ನು ಸಂರಕ್ಷಿಸದೇ, ಬೆಳೆದಿರುವ ಮರಗಳನ್ನು ಕಡಿದು ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಅಂತರ್ಜಲಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಲಕ್ಷ್ಮೀನಾರಾಯಣ್ ಮಾತನಾಡಿ, ನಮ್ಮ ಇಲಾಖೆಯಿಂದ ತಾಲ್ಲೂಕಿನಲ್ಲಿರುವ ಆಟದ ಮೈದಾನ, ಸರ್ಕಾರಿ ಗುಂಡು ತೋಪುಗಳು ಮತ್ತು ರಸ್ತೆಗಳಿಗೆ ಹಾಗೂ ದೇವಸ್ಥಾನದ ಜಾಗಗಳನ್ನು ಗುರುತಿಸಿ, ಆ ಜಾಗದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಬೆಳೆಸುವ ಉದ್ದೇಶ ಇದೆ ಹಾಗೂ ಗ್ರಾಮಸ್ಥರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪವನ್ ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಕೇಶವಮೂರ್ತಿ, ಉಪವಲಯ ಅರಣ್ಯಾಧಿಕಾರಿ ನಾಗೇಶ್, ಅನಿಲ್‌ಕುಮಾರ್, ಗಸ್ತು ಅರಣ್ಯ ಪಾಲಕರಾದ ಸತೀಶ್, ನೀಲಮ್ಮ, ಪಿಎಸಿಬಿಎನ್ ಅಧ್ಯಕ್ಷ ಮೋಹನ್‌ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್, ಗ್ರಾ.ಪಂ. ಸದಸ್ಯ ನರಸಿಂಹಯ್ಯ, ಲೋಕನಾಥ್ ಮತ್ತಿತರರು ಭಾಗವಹಿಸಿದ್ದರು.