ತೈಲ ಬೆಲೆ ಏರಿಕೆ: ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆ
ಪಾವಗಡ, ಜೂ. ೨೨- ಕಾಂಗ್ರೆಸ್ ಸರ್ಕಾರ ಜನ ಮೂಗಿಗೆ ತಪ್ಪು ಸವರಿ ವೋಟು ಗಿಟ್ಟಿಸಿಕೊಳ್ಳಲು ಗ್ಯಾರಂಟಿ ಘೋಷಣೆ ಮಾಡಿದೆ. ನಂತರ ಪರ್ಯಾಯ ರೂಪದಲ್ಲಿ ಬೆಲೆಗಳನ್ನು ಏರಿಸಿ ಹಣ ದರೋಡೆ ಮಾಡಲು ಮುಂದಾಗಿದೆ ಎಂದು ಸಾರ್ವಜನಿಕರು ಕಾಂಗ್ರೆಸ್‌ನ ತಂತ್ರಗಾರಿಕೆಯನ್ನು ಅರಿತಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್ ಆಟ ನಡೆಯುವುದಿಲ್ಲ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್ ಹೇಳಿದರು.
ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ರಸ್ತೆ ರೋಖೋ ಚಳವಳಿ ನಡೆಸಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ದ ಘೋಷಣೆಗಳನ್ನು ಕೂಗಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು. ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿ ಜನ ವಿರೋಧಿ ಸರ್ಕಾರವಾಗಿದೆ. ಇದರಿಂದ ಜನಸಾಮಾನ್ಯರ ಮೇಲೆ ಹೊರೆಯಾಗಲಿದೆ. ಇದೊಂದು ಅವಿವೇಕದ ನಿರ್ಧಾರ, ಪೆಟ್ರೋಲ್ ದರವನ್ನು ಪುನರ್ ಪರಿಶೀಲಿಸಬೇಕು ಎಂದರು.
ಬಿಜೆಪಿ ಮುಖಂಡ ಜಿ.ಟಿ. ಗಿರೀಶ್ ಮಾತನಾಡಿ, ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಪೆಟ್ರೋಲ್ ದರ ಏರಿಕೆ ವಿರುದ್ದ ಖಂಡಿಸಿ ಹೋರಾಟ ಮಾಡಿದ್ದರು. ಈಗ ಪೆಟ್ರೋಲ್ ದರವನ್ನು ಅವರೇ ಏರಿಸಿದ್ದಾರೆ. ಜನತೆ ಕಣ್ಣು ಮುಚ್ಚಿ ಕುಳಿತ್ತಿಲ್ಲ, ವಾಲ್ಮೀಕಿ ನಿಗಮದ ಕೋಟಿಗಟ್ಟಲೆ ಹಣ ನುಂಗಿದ ಸರ್ಕಾರಕ್ಕೆ ಅಧಿಕಾರದಲ್ಲಿರಲು ನೈತಿಕ ಹಕ್ಕಿಲ್ಲ ಎಂದರು.
ಪ್ರತಿಭಟನೆಯಲ್ಲಿ ಅರಸೀಕರೆ ಮೆಡಿಕಲ್ ತಿಪ್ಪೇಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ರಂಗಣ್ಣ, ಬಿಜೆಪಿ ಜಿಲ್ಲಾ ಪದಾಧಿಕಾರಿ ಶಿವಕುಮಾರ್ ಸಾಕೇಲ, ಗಂಗಾಧರನಾಯ್ಡು, ಬ್ಯಾಡನೂರು ಶಿವು, ಕಾವಲಗೇರಿ ರಾಮಾಂಜಿ, ರೈತ ಸಂಘದ ಪೂಜಾರಪ್ಪ, ಅಲ್ಕುಂದ ರಾಜ್ ಮತ್ತಿತರರು ಭಾಗವಹಿಸಿದ್ದರು.