ನಿವೇಶನ ಹಕ್ಕು ಪತ್ರದ ಹಕ್ಕಿಗಾಗಿ ಮುಂದುವರೆದ ಹೋರಾಟ
ತುಮಕೂರು, ಜೂ. ೨೨- ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ವಾಸಿಸುತ್ತಿರುವ ಹಂದಿ ಜೋಗಿ ಸಮುದಾಯ, ಅಲ್ಪಸಂಖ್ಯಾತರು ಮತ್ತು ದಲಿತ ಸಮುದಾಯ ಸೇರಿದಂತೆ ಹಲವು ಜಾತಿ-ಜನಾಂಗದ ಜನರು ಸ್ವಂತ ನಿವೇಶನ ಹಾಗೂ ಭೂಮಿ ಹಕ್ಕು ಪತ್ರಗಳಿಲ್ಲದೆ ನಿರ್ಗತಿಕರಾಗಿ ಜೀವನ ನಡೆಸುತ್ತಿದ್ದಾರೆ. ಅವರೆಲ್ಲರಿಗೂ ನಿವೇಶನ ಹಂಚಿಕೆ ಮಾಡಿ, ವಸತಿ ನೀಡಿ, ಹಕ್ಕು ಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ.
ನಗರದಲ್ಲಿ ಸಮಿತಿಯ ನೇತೃತ್ವದಲ್ಲಿ ಸಮುದಾಯಗಳ ಜನರು ನಡೆಸುತ್ತಿರುವ ಧರಣಿ ೫ನೇ ದಿನಕ್ಕೆ ಕಾಲಿಟ್ಟಿದ್ದು, ಹಕ್ಕುಪತ್ರ ನೀಡುವಂತೆ ಒತ್ತಾಯಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಧುಗಿರಿ ತಾಲ್ಲೂಕಿನ ಜನಕಲೋಟಿ, ತಿಗಳರಹಳ್ಳಿ, ಐಡಿಹಳ್ಳಿ, ವಿರುಪಗೊಂಡನಹಳ್ಳಿ, ಬ್ಯಾಲ್ಯ ಹಾಗೂ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ, ಹುಲಿಕುಂಟೆ ಗ್ರಾಮ, ಇರಕಸಂಸ್ರ ಕಾಲೋನಿ, ಓಬನಹಳ್ಳಿ ಮತ್ತು ತುಮಕೂರು ತಾಲ್ಲೂಕಿನ ಅಮಲಾಪುರ, ಗಂಗಸಂದ್ರ, ಕೌತಮಾರನಹಳ್ಳಿಯ ನಿವೇಶನ ರಹಿತ ಸಂತ್ರಸ್ತರು ಕುಟುಂಬಗಳು ಧರಣಿ ನಡೆಸುತ್ತಿದ್ದಾರೆ.
ನಿವೇಶನಗಳನ್ನು ಒದಗಿಸಿಕೊಡುವಂತೆ ಹಲವು ಬಾರಿ ಪ್ರತಿಭಟನೆಗಳನ್ನು ನಡೆದರೂ ಸರ್ಕಾರ ತಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ತಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಮೂಲಭೂತ ಸೌಲಭ್ಯಗಳನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕರ ಹಕ್ಕು. ಆದರೆ, ಜಿಲ್ಲಾಡಳಿತವು ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಚಿಕ್ಕ ಪೆಂಡಾಲ್‌ನಲ್ಲಿಯೇ ೧೦೦ ಜನ ಕುಳಿತು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಪೆಂಡಾಲ್ ಕಂಬಿಗಳಿಗೆ ಜೋಕಾಲಿ ಹಾಕಿ ಎಳೆ ಕಂದಮ್ಮಗಳೊಂದಿಗೆ ತಾಯಂದಿರು ಕೂಡ ಧರಣಿಯಲ್ಲಿದ್ದಾರೆ. ಮಳೆ, ಗಾಳಿಗೂ ಜಗ್ಗದೆ ಪ್ರತಿಭಟಿಸುತ್ತಿದ್ದಾರೆ. ಆದರೂ ಅವರ ಹೋರಾಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅವರ ಅಳಲನ್ನು ಕೇಳುತ್ತಿಲ್ಲ. ಇನ್ನಾದರೂ ಜಿಲ್ಲಾಡಳಿತದ ಅಧಿಕಾರಿಗಳು ಈ ಧರಣಿ ನಿರತರ ಸಮಸ್ಯೆಯನ್ನು ಆಲಿಸಿ, ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಬುದ್ಧಿಜೀವಿಗಳು ಒತ್ತಾಯಿಸಿದ್ದಾರೆ.