ಸರ್ಕಾರದ ತೈಲ ಬೆಲೆ ಏರಿಕೆ ನೀತಿ ವಿರುದ್ಧ ಪ್ರತಿಭಟನೆ
ಕೊರಟಗೆರೆ, ಜೂ. ೨೨- ರಾಜ್ಯ ಸರ್ಕಾರದ ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಎಸ್‌ಎಸ್‌ಆರ್ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಿದರು.
ರಾಜ್ಯ ಸರ್ಕಾರ ಏಕಾಏಕಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಿಸಿ ಜನರ ಜೀವನಕ್ಕೆ ಹೊರೆ ಮಾಡಿದೆ. ಗ್ಯಾರಂಟಿಗಳನ್ನು ನಿಭಾಯಿಸಲು ನಿತ್ಯ ಬಳಕೆ ವಸ್ತುಗಳ ಬೆಲೆ ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಸಾಮಾನ್ಯ ಜನರ ಜೀವನ ಸಂಕಷ್ಟಕ್ಕೆ ತಲುಪಿದೆ. ಕೂಡಲೇ ಸರ್ಕಾರ ತೈಲ ಬೆಲೆ ಇಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸುದರ್ಶನ್, ರಾಜ್ಯ ಸರ್ಕಾರ ತನ್ನ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆಯ ನೀತಿಯನ್ನು ಅನುಸರಿಸಿ ಅದರ ಹೊರೆಯನ್ನು ರಾಜ್ಯದ ಜನರ ಮೇಲೆ ಹಾಕುವ ಮೂಲಕ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದರು.
ಸರ್ಕಾರದ ಸರ್ವಾಧಿಕಾರಿ ನಿರ್ಧಾರದ ಧೋರಣೆಯನ್ನು ಹೊಂದಿದೆ. ರಾಜ್ಯದಲ್ಲಿ ಈ ಸರ್ಕಾರ ಬಂದ ಮೇಲೆ ಒಂದೇ ಒಂದು ಅಭಿವೃಧ್ದಿ ಕೆಲಸಗಳು ನಡೆದಿಲ್ಲ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಇದರ ಬೆನ್ನಲ್ಲೆ ಈ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಹೆಚ್ಚಿಸಿ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶದ ಸೇಡನ್ನು ಜನತೆಯ ಮೇಲೆ ತೀರಿಸಿಕೊಳ್ಳಲು ಹೊರಟಿದೆ ಎಂದು ದೂರಿದರು.
ಈ ಕೂಡಲೇ ರಾಜ್ಯ ಸರ್ಕಾರ ಹೆಚ್ಚಿಸಿರುವ ತೈಲ ಬೆಲೆಯನ್ನು ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ನಿಕಟ ಪೂರ್ವ ಅಧ್ಯಕ್ಷ ಪವನ್‌ಕುಮಾರ್ ಮಾತನಾಡಿ, ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯು ಕೇವಲ ವಾಹನ ಸವಾರರಿಗೆ ಮಾತ್ರ ಹೊರೆಯಾಗದೆ ಸರಕು ಸಾಗಾಣಿಕೆಯ ಮೇಲೆ ಪರಿಣಾಮ ಬೀರಲಿದೆ. ಪ್ರಯಾಣದ ದರವನ್ನು ಹೆಚ್ಚಿಸಲಿದೆ, ಅಷ್ಟೇ ಅಲ್ಲದೆ ತರಕಾರಿಗಳ ಬೆಲೆ ದಿನನಿತ್ಯ ಗೃಹಬಳಕೆಯ ವಸ್ತುಗಳ ಬೆಲೆ, ದವಸ ದಾನ್ಯಗಳ ಬೆಲೆ, ಕಟ್ಟಡ ಸಾಮಗ್ರಿಗಳ ಬೆಲೆ ಕೂಡ ಹೆಚ್ಚಾಗಲಿದೆ. ಈ ರಾಜ್ಯದ ಜನತೆಗೆ ನೆಮ್ಮದಿಯ ಬದುಕು ನೀಡಲು ಸಾಧ್ಯವಾಗದಿದ್ದರೆ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ ಎಂದರು.
ಪ್ರತಿಭಟನೆಯಲ್ಲಿ ಪ.ಪಂ.ಸದಸ್ಯ ಪ್ರದೀಪ್‌ಕುಮಾರ್, ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಅರುಣ್, ಮಾಜಿ ಪ್ರಧಾನ ಕಾರ್ಯದರ್ಶಿ ಗುರುದತ್, ಯುವಮೋರ್ಚ ಅಧ್ಯಕ್ಷ ಶಿವಕುಮಾರ ಸ್ವಾಮಿ, ಉಪಾಧ್ಯಕ್ಷ ನಟರಾಜು, ರಾಜಣ್ಣ, ಮುಖಂಡರುಗಳಾದ ಪ್ರಕಾಶ್‌ರೆಡ್ಡಿ, ವಿಶ್ವನಾಥ್, ನಾಗರಾಜು, ರಂಗರಾಜು, ಚಂದ್ರಣ್ಣ, ಮುಕ್ಕಣ್ಣಪ್ಪ, ಶ್ರೀನಿವಾಸ್, ದಯಾನಂದ್, ಲಿಂಗರಾಜು, ಚೇತನ್, ಸುರೇಶ್, ಗೋವಿಂದರೆಡ್ಡಿ, ನಾಗರಾಜು, ಶಿವಣ್ಣ, ಶಿವರುದ್ರಪ್ಪ, ಆಟೋ ಗೋಪಿ ಮತ್ತಿತರರು ಪಾಲ್ಗೊಂಡಿದ್ದರು.