ಅರಣ್ಯ, ಪೋಲಿಸ್ ಇಲಾಖೆ ವಿರುದ್ಧ ರೈತರಿಂದ ಬೃಹತ್ ಪ್ರತಿಭಟನೆ
ಶಿಡ್ಲಘಟ್ಟ,ಜೂ,೨೨:ರೈತರ ಜಮೀನಿನಲ್ಲಿ ಬೆಳೆದ ಬೆಳೆ ನಾಶ ಪಡಿಸಿ ಬೇಲಿ ನಿರ್ಮಿಸಿದ್ದ ಅರಣ್ಯ ಇಲಾಖೆ ವಿರುದ್ದ ದಿಬ್ಬೂರಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮ ವಹಿಸದ ಪೋಲಿಸ್ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.
ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾದ್ಯಕ್ಷ ಭಕ್ತರಹಳ್ಳಿ ಬೈರೇಗೌಡರ ನೇತೃತ್ವದಲ್ಲಿ ನೂರಾರು ರೈತರು ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ವಿರುದ್ದ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿದರು.
ಸಾದಲಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಅನೇಕ ಗ್ರಾಮಗಳ ಜಮೀನುಗಳಲ್ಲಿ ಬೆಳೆ ಬೆಳೆಯುತ್ತಿರುವ ರೈತರಿಗೆ ಪಹಣಿ ಹೊಂದಿದ್ದರೂ ಸಹ ಅರಣ್ಯ ಇಲಾಖೆಗೆ ಸೇರಿದ್ದೆಂದು ಬೌಂಡರಿ ಫಿಕ್ಸ್ ಮಾಡಿ ಕಲ್ಲು ಕೂಚಗಳನ್ನು ಅಳವಡಿಸಿರುವುದನ್ನು ಖಂಡಿಸಿ ರೈತ ಕುಟುಂಬದವರೆಲ್ಲ ಸೇರಿ ದಿಬ್ಬೂರಹಳ್ಳಿ ಪೋಲಿಸ್ ಠಾಣೆಗೆ ಅರಣ್ಯ ಇಲಾಖೆಯ ವಿರುದ್ಧ ದೂರು ನೀಡಿದ್ದರು.
ಜಿಲ್ಲಾಧಿಕಾರಿಗಳು ಮತ್ತು ರೈತ ಮುಖಂಡರ ನಡುವೆ ಸಭೆ ಆಯೋಜನೆ ಮೂಲಕ ನೆಳೆ ನಷ್ಟದ ಬಗ್ಗೆ ಮತ್ತು ರೈತರ ಜಮೀನುಗಳಿಗೆ ಅರಣ್ಯ ಇಲಾಖೆಯವರಿಂದ ಆಗುತ್ತಿರುವ ದೌರ್ಜನ್ಯದ ಬಗ್ಗೆ ಸೂಕ್ತ ನ್ಯಾಯ ನೀಡಬೇಕೆಂದು ಈಗಾಗಲೆ ಚರ್ಚಿಸಲಾಗಿದ್ದರೂ ರೈತರ ಬಗ್ಗೆ ನಿರ್ಲಕ್ಷ್ಯ ತೋರಿ ಅರಣ್ಯ ಇಲಾಖೆಯ ವಿರುದ್ದ ಯಾವುದೇ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಜಮೀನುಗಳಲ್ಲಿ ಬೆಳೆ ಹಾಕಿದ್ದರೂ ಸಹಿತ ಅರಣ್ಯ ಇಲಾಖೆಯವರು ಜಂಟಿ ಸರ್ವೆ ಮಾಡದೆ ಏಕಾ ಏಕಿ ಬೆಳೆ ಇದೆ ಎಂಬುದು ಲೆಕ್ಕಿಸದೆ ಸೀಮೆಂಟ್ ಕಂಬಗಳನ್ನು ನೆಟ್ಟು ಮುಳ್ಳು ತಂತಿ ಅಳವಡಿಸಿರುವುದನ್ನು ರೈತ ಸಂಘದ ವತಿಯಿಂದ ದಾಳಿ ನಡೆಸಿ ಅರಣ್ಯ ಇಲಾಖೆಯವರು ಹಾಕಿದ ಕಂಬಗಳ ಬೌಂಡರಿಯನ್ನು ಕಿತ್ತು ಹಾಕಿ ಉಳುಮೆ ಮಾಡಿದರ ಹಿನ್ನಲೆ ಉಪ ವಲಯ ಅರಣ್ಯಾಧಿಕಾರಿ ಎಸ್.ಎನ್ ಜಯಚಂದ್ರ,ಗಸ್ತು ಅರಣ್ಯ ಪಾಲಕ ಸಂದೀಪ್ ಟಿ.ಡಿ, ಹಾಗೂ ಸಿಬ್ಬಂದಿಯವರು ತಲಕಾಯಲಬೆಟ್ಟ ಗ್ರಾಮದ ನಿವಾಸಿಗಳಾದದ ೧) ಕಾಳೇಗೌಡ, ೨) ಗಿರೀಶ್, ೩) ಯರ್ರಮ್ಮ ಕೊಂ ಚಿಕ್ಕವೀರಣ್ಯ ೪) ಚಿಕ್ಕ ವೀರಣ್ಣ. ೫) ನಾರಾಯಣಸ್ವಾಮಿ, ೬) ಗಂಗುಲಪ್ಪ ಬಿನ್ ವೆಂಕಟರಾಯಪ್ಪ, ೭) ತಿಪ್ಪಣ್ಯ ಹಾಗೂ ಇತರರ ಮೇಲೆ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುತ್ತಾರೆ ಎಂದು ದಿಬ್ಬೂರಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿ ಎಪ್ ಐ ಆರ್ ಮಾಡಿಸಿದ ಹಿನ್ನಲೆಯಿಂದ ರೊಚ್ಚಿ
ಗೆದ್ದ ರೈತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಸ್ಥಳಕ್ಕಾಗಮಿಸಿದ ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಮುರಳಿಧರ್ ಮತ್ತು ಶಿಡ್ಲಘಟ್ಟ ವೃತ್ತ ನಿರೀಕ್ಷಕ ಶ್ರೀನಿವಾಸ್ ರೈತರ ಸಮಸ್ಯೆಗಳನ್ನು ಆಲಿಸಿದ ನಂತರ ರೈತರಿಗಾಗಿರುವ ತೊಂದರೆಗಳ ಬಗ್ಗೆ ನಮಗೆ ಗೊತ್ತಿಲ್ಲ ಸಂಪೂರ್ಣ ತನಿಖೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಮತ್ತು ರೈತರ ಮೇಲಾಗಿರುವ ಎಪ್‌ಐಆರ್ ಗೆ ಬಿ ರಿಪೂರ್ಟ್ ಹಾಕಲು ಸೂಚನೆ ನೀಡುತ್ತೇನೆ ಎಂದು ರೈತ ಮುಖಂಡರಿಗೆ ಮನವಲಿಸಿದ ನಂತರ ಪ್ರತಿಭಟನೆ ಕೈ ಬಿಡುವಂತಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಸದಸ್ಯರು ಮತ್ತು ಎಲ್ಲಾ ತಾಲೂಕು ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ರೈತ ಸದಸ್ಯರು ರೈತ ಮುಖಂಡರು ಹಾಗೂ ರೈತ ಮಹಿಳೆಯರು, ಜಿಲ್ಲಾಧ್ಯಕ್ಷ ಹೆಚ್.ಪಿ ರಾಮನಾಥ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ವಿ ವೇಣುಗೋಪಾಲ್, ರಾಜ್ಯ ಸಂಚಾಲಕರು ಲಕ್ಷ್ಮಣ್ ರೆಡ್ಡಿ, ರಾಜ್ಯ ಮಹಿಳಾ ಸಂಚಾಲಕಿ ಉಮಾ, ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ಹಾಗೂ ತಾಲ್ಲೂಕು ಸಮಿತಿಗಳು ಹಾಗೂ ಸುತ್ತ ಮುತ್ತಲಿನ ರೈತರು ಮೂಲಕ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.