ಅಧಿಕಾರಿಗಳ ಗೈರು ತ್ರೈಮಾಸಿಕ ಜನಸಂಪರ್ಕ ಸಭೆ ಮುಂದೂಡಿಕೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.22: ಸೆಸ್ಕಾಂನ ತ್ರೈಮಾಸಿಕ ಜನಸಂಪರ್ಕ ಸಭೆಗೆ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಸತತವಾಗಿ ಗೈರು ಹಾಜರಾಗುತ್ತಿರುವುದನ್ನು ಪ್ರತಿಭಟಿಸಿ ವಿದ್ಯುತ್ ಬಳಕೆದಾರ ರೈತರು ಇಂದಿನ ತ್ರೈಮಾಸಿಕ ಜನಸಂಪರ್ಕ ಸಭೆಯನ್ನು ಬಹಿಷ್ಕರಿಸುವ ಮೂಲಕ ಇಲಾಖೆಯ ಕಾರ್ಯವೈಕರಿಯ ವಿರುದ್ದ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು.
ಪಟ್ಟಣದ ಸೆಸ್ಕಾಂ ವಿಭಾಗೀಯ ಕಛೇರಿಯ ಆವರಣದಲ್ಲಿಂದು ವಿದ್ಯುತ್ ಬಳಕೆದಾರ ರೈತರ ತ್ರೈಮಾಸಿಕ ಜನಸಂಪರ್ಕ ಸಭೆಯನ್ನು ವಿದ್ಯುತ್ ಇಲಾಖೆ ಆಯೋಜಿಸಿತ್ತು. ಉಪ ವಿಭಾಗೀಯ ಕಛೇರಿಯ ಕಾರ್ಯಪಾಲಕ ಅಭಿಯಂತರೆ ವಿನುತಾ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಯಿತು. ಸಭೆ? ಆರಂಭವಾಗುತ್ತಿದ್ದಂತೆಯೇ ವಿದ್ಯುತ್ ನಿಗಮದ ಮೇಲಧಿಕಾರಿಗಳ ಗೈರು ಹಾಜರಿಯಲ್ಲಿ ಸಭೆ ನಡೆಸುವ ಔಚಿತ್ಯವನ್ನು ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮತ್ತು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಪ್ರಶ್ನಿಸಿ ಸಭೆಯನ್ನು ಮುಂದೂಡುವಂತೆ ಆಗ್ರಹಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನಿಯಮಾನುಸಾರ ಸೆಸ್ಕಾಂ ಜಿಲ್ಲಾ ಅಧೀಕ್ಷಕ ಇಂಜಿನಿಯರ್ ಸಮ್ಮುಖದಲ್ಲಿ ಸಭೆ ನಡೆಯಬೇಕು. ರೈತರ ಸಮಸ್ಯೆಗಳು ಬೆಟ್ಟದಷ್ಟಿವೆ. ಅವುಗಳನ್ನು ಪರಿಹರಿಸುವ ಶಕ್ತಿ ತಾಲೂಕು ಮಟ್ಟದ ಅಧಿಕಾರಿಗಳಿಗಿಲ್ಲ. ಕಳೆದ ನಾಲ್ಕು ತ್ರೈಮಾಸಿಕ ಸಭೆಗಳಿಗೂ ಇಲಾಖೆಯ ಜಿಲ್ಲಾ ಅಧೀಕ್ಷಕ ಇಂಜಿನಿಯರ್ ಸಲ್ಲದ ಕಾರಣಗಳನ್ನು ನೀಡಿ ಗೈರು ಹಾಜರಾಗುತ್ತಿದ್ದಾರೆ. ಅದೀಕ್ಷಕ ಇಂಜಿನಿಯರ್ ಅವರು ಸೂಚಿಸಿದ ದಿನಾಂಕವೇ ಜನ ಸಂಪರ್ಕ ಸಭೆಯನ್ನು ಆಯೋಜಿಸುತ್ತಿದ್ದರೂ ಅವರಾಗಲೀ ಅಥವಾ ಸೆಸ್ಕಾಂ ಆಡಳಿತ ನಿರ್ದೇಶಕರಾಗಲೀ ಸಭೆಗೆ ಬರುತ್ತಿಲ್ಲ. ಉನ್ನತ ಅಧಿಕಾರಿಗಳಿಲ್ಲದೆ ರೈತರ ಸಮಸ್ಯೆಗಳ ಪರಿಹಾರ ಅಸಾಧ್ಯ. ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯಿಲ್ಲದ ನಿಮ್ಮ ಮುಂದೆ ನಮ್ಮ ಅಳಲು ತೋಡಿಕೊಂಡರೂ ಪ್ರಯೋಜನವಿಲ್ಲ. ಮೇಲಧಿಕಾರಿಗಳು ಬಂದು ಸಮಸ್ಯೆಗಳನ್ನು ಆಲಿಸುವುದಾದರೆ ಮಾತ್ರ ಜನ ಸಂಪರ್ಕ ಸಭೆಗಳನ್ನು ಆಯೋಜಿಸಿ. ಇಲ್ಲದಿದ್ದರೆ ಸುಖಾ ಸುಮ್ಮನೆ ಸಭೆ ಕರೆದು ರೈತರ ಸಮಯವನ್ನು ಹಾಳು ಮಾಡಬೇಡಿ ಎಂದು ಕಿಡಿಕಾರಿದರು. ಮೇಲಧಿಕಾರಿಗಳ ಬರುವಿಕೆಯನ್ನು ಖಚಿತಪಡಿಸಿಕೊಂಡು ಮತ್ತೊಂದು ದಿನ ಸಭೆ ಕರೆಯಿರಿ. ಅಲ್ಲಿಯವರೆಗೆ ಸಭೆಯನ್ನು ಮುಂದೂಡಿ. ರೈತರ ಬಗೆಗಿನ ಅಧಿಕಾರಿಗಳ ಅಸಡ್ಡೆಯನ್ನು ಖಂಡಿಸಿ ನಾವು ಇಂದಿನ ಸಭೆಯನ್ನು ಬಹಿಷ್ಕರಿಸುತ್ತಿರುವುದಾಗಿ ರಾಜೇಗೌಡ ಪ್ರಕಟಿಸಿದರು.
ಕರಪತ್ರಗಳನ್ನು ಮುದ್ರಿಸಿ: ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ ರೈತರಿಗೆ ಯಾವುದೇ ಮಾಹಿತಿ ನೀಡದೆ ಜನಸಂಪರ್ಕ ಸಭೆ ಕರೆಯುತ್ತಿರುವ ಸೆಸ್ಕಾಂ ಕಾರ್ಯವೈಕರಿಯನ್ನು ಖಂಡಿಸಿದರು. ಇಂದು ಕಛೇರಿಯ ಆವರಣದಲ್ಲಿ ಜನಸಂಪರ್ಕ ಸಭೆ ಕರೆದಿದ್ದೀರಿ. ಆದರೆ ರೈತರು ಸಭೆಗೆ ಬರದಂತೆ ಕಛೇರಿಯ ಮುಖ್ಯದ್ವಾರವನ್ನು ಬಂದ್ ಮಾಡಿದ್ದೀರಿ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನ ಸಂಪರ್ಕ ಸಭೆಯ ಬಗ್ಗೆ ಕರ ಪತ್ರಗಳನ್ನು ಮುದ್ರಿಸಿ ನಿಮ್ಮ ಲೈನ್ ಮೆನ್ ಗಳ ಮೂಲಕ ಅಥವಾ ಆಯಾ ಗ್ರಾಮ ಪಂಚಾಯತಿ ಅಧಿಕಾರಿಗಳ ಮೂಲಕ ರೈತರಿಗೆ ಸಭಾ ಮಾಹಿತಿ ನೀಡಿ. ಕರಪತ್ರ ಮುದ್ರಿಸಿ ಹಂಚಲಾರದಷ್ಟು ನಿಮ್ಮ ಇಲಾಖೆ ಆರ್ಥಿಕ ದಿವಾಳಿಯಾಗಿದೆಯೆ?. ನಿಮ್ಮ ಲೈನ್ ಮೆನ್‍ಗಳು ಹಳ್ಳಿ ಹಳ್ಳಿಗಳಲ್ಲಿ ರೈತರ ಸುಲಿಗೆ ಮಾಡುತ್ತಿದ್ದಾರೆ. ಪಟ್ಟಣದ ಸೆಸ್ಕಾಂ ಉಪ ವಿಭಾಗ 01 ಮತ್ತು 02 ರ ಕಛೇರಿಯಲ್ಲಿ ಸಹಾಯಕ ಕಾರ್ಯಪಾಲಕರೇ ಇಲ್ಲ. ಸಮಸ್ಯೆಗಳನ್ನು ಪರಿಹಾರ ಮಾಡುವ ಸಾಮಥ್ರ್ಯ ಇಲ್ಲದ ನೀವು ಪದೇ ಪದೇ ಜನ ಸಂಪರ್ಕ ಸಭೆಗಳನ್ನು ಆಯೋಜಿಸಿ ರೈತರನ್ನು ಅಪಮಾನ ಮಾಡುತ್ತಿದ್ದೀರಿ. ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಸಿದರು.
ಸಭೆ ಮುಂದೂಡಿಕೆ: ರೈತರ ಆಕ್ರೋಶ ಬುಗಿಲೇಳುತ್ತಿದ್ದಂತೆಯೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಸೆಸ್ಕಾಂ ವಿಭಾಗೀಯ ಕಛೇರಿಯ ಕಾರ್ಯಪಾಲಕ ಅಭಿಯಂತರೇ ವಿನುತ ಮೇಲಾಧಿಕಾರಿಗಳನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಸಭೆಯನ್ನು ಒಂದು ವಾರಗಳ ಕಾಲ ಮುಂದೂಡಿದರು. ಅಧೀಕ್ಷಕ ಇಂಜಿನಿಯರ್ ಅವರ ಬರುವಿಕೆಯ ದಿನಾಂಕವನ್ನು ಖಚಿತಪಡಿಸಿಕೊಂಡು ಮುಂದಿನ ವಾರ ಪೂರ್ವ ಮಾಹಿತಿ ನೀಡಿ ರೈತರ ತ್ರೈಮಾಸಿಕ ಸಭೆಯನ್ನು ಆಯೋಜಿಸುವುದಾಗಿ ಅವರು ರೈತರಿಗೆ ಭರವಸೆ ನೀಡಿ ಸಭೆಯನ್ನು ಮುಂದೂಡಿದರು.