ತಮಿಳುನಾಡು ಕಳ್ಳಭಟ್ಟಿ ದುರಂತ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ. 22- ತಮಿಳುನಾಡಿನಲ್ಲಿ ಕಳ್ಳಭಟ್ಟಿ ದುರಂತದಲ್ಲಿ ಹಲವರು ಸಾವನ್ನಪ್ಪಿದ ಹಿನ್ನೆಲೆ ಗಡಿಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿಗಳು ಹಳೇ ಅಡ್ಡೆಗಳಿಗೆ ದಾಳಿ ಮಾಡಿದ್ದು ಮಾತ್ರವಲ್ಲದೆ, ಹಳೇ ಕೇಸ್‍ಗಳ ಆರೋಪಿಗಳ ಮನೆಗಳಲ್ಲಿ ತಲಾಶ್ ನಡೆಸುವ ಜೊತೆಗೆ ಕಳ್ಳಭಟ್ಟಿ ತಯಾರಿಕೆ ಬಗ್ಗೆ ಜಾಗೃತಿ ಮೂಡಿಸಿ, ಇಂಥ ಪ್ರಕರಣಗಳು ಕಂಡು ಬಂದರೆ ತಕ್ಷಣ ಮಾಹಿತಿ ನೀಡುವಂತೆ ಸೂಚನೆಯನ್ನು ಕೊಟ್ಟಿದ್ದಾರೆ.
ಅಬಕಾರಿ ಉಪ ಆಯುಕ್ತ ನಾಗಶಯನ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕ ಮೋಹನ್‍ಕುಮಾರ್, ಇನ್ಸ್‍ಪೆಕ್ಟರ್‍ಗಳಾದ ಸುನೀಲ್, ಉಮಾಶಂಕರ್, ಸುರೇಶ್, ಹನೂರು ಪೊಲೀಸ್ ಇನ್ಸ್‍ಪೆಕ್ಟರ್ ಮನೋಜ್‍ಕುಮಾರ್ ಹಾಗೂ ಸಿಬ್ಬಂದಿಗಳು ಚಾಮರಾಜನಗರ ತಾಲೂಕಿನ ಮೂಕನಪಾಳ್ಯ ಗ್ರಾಮದ ಹಳೇ ಆರೋಪಿಗಳ ಮನೆ ಹಾಗೂ ಕಳ್ಳಭಟ್ಟಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಯಾವುದೇ ಅಕ್ರಮಗಳು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ.
ಹನೂರು ತಾಲೂಕಿನ ಕೊತ್ತಗುಳಿ, ಸಾಹೇಬರ ದೊಡ್ಡಿ, ವೀರನಾಯ್ಕನ ದೊಡ್ಡಿ, ಮಾರಳ್ಳಿ, ದೊಮ್ಮನಗದ್ದೆ ಹಾಗೂ ಕಾಂಚಳ್ಳಿ ಗ್ರಾಮಗಳಲ್ಲಿ ಹಾಗೂ ಸುತ್ತಮುತ್ತಲ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಕಳ್ಳಭಟ್ಟಿ ಮಾಡುತ್ತಿದ್ದ ಹಳೇ ಸ್ಥಳಗಳನ್ನು ಪರಿಶೀಲಿಸಿದ್ದಾರೆ. ಹಳೇ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿದ ಪೆÇಲೀಸರು ಯಾವುದೇ ರೀತಿಯ ಕಳ್ಳಭಟ್ಟಿ ತಯಾರಿಸದಂತೆ ಗ್ರಾಮಸ್ಥರಿಗೆ ತಿಳಿವಳಿಕೆ ಹೇಳಿದ್ದಾರೆ.
ಅಬಕಾರಿ ಉಪ ಅಧೀಕ್ಷಕ ನಾಗಶಯನ ಮಾಹಿತಿ ನೀಡಿ, ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳಭಟ್ಟಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ತಮಿಳುನಾಡಿನಲ್ಲಿ ನಡೆದ ದುರಂತದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ದಿಢೀರ್ ಪರಿಶೀಲನೆ ನಡೆಸಿದ್ದು, ಯಾವುದೇ ರೀತಿ ಕಳ್ಳಭಟ್ಟಿ ಪ್ರಕರಣ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.