ನಾಡಪ್ರಭು ಕೆಂಪೇಗೌಡರ ಜಯಂತಿ: ಜಾತ್ಯತೀತವಾಗಿ ಆಚರಿಸಲು ಮನವಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.22: ಜೂನ್ 27 ರ ಗುರುವಾರ ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಚರಿಸಲಾಗುತ್ತಿರುವ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸಲು ತಾಲೂಕು ಒಕ್ಕಲಿಗರ ಸಂಘಟನೆಗಳು ನಿರ್ಧರಿಸಿವೆ.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ತಾಲೂಕು ಘಟಕದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ಒಕ್ಕಲಿಗರ ಸಂಘಟನೆಗಳ ಮುಖಂಡರು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜಾತ್ಯಾತೀತವಾಗಿ ಅಚರಿಸಲು ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ನಾಟನಹಳ್ಳಿ ಗಂಗಾಧರ್ ನಾಡಪ್ರಭು ಕೆಂಪೇಗೌಡರು ಜಾತಿಯ ಕಟ್ಟುಪಾಡುಗಳನ್ನು ಮೀರಿ ನಾಡಿನ ಸಮಸ್ತ ಜನರ ಒಳಿತಿಗಾಗಿ ಶ್ರಮಿಸಿದವರು. ಒಕ್ಕಲಿಗ ಸಮಾಜ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಜಾತಿ, ಮತ, ಪಂಥಗಳನ್ನು ಮೀರಿ ಬದುಕುತ್ತಿದೆ. ಒಕ್ಕಲಿಗ ಸಮಾಜಕ್ಕೆ ಯಾರ ಬಗ್ಗೆಯೂ ಪೂರ್ವಾಗ್ರಹ ರಾಗ ದ್ವೇಷಗಳಿಲ್ಲ. ನಾಡಪ್ರಭು ಕೆಂಪೇಗೌಡರ ಅಶಯದಂತೆ ಸರ್ವ ಜನರ ಜೊತೆ ಒಗ್ಗೂಡಿ ಬದುಕುವುದು ನಮ್ಮ ಆಶಯ. ಅದರಂತೆ ಜೂನ್ 27 ರಂದು ನಡೆಯಲಿರುವ ಕೆಂಪೇಗೌಡರ ಜಯಂತಿಯಲ್ಲಿ ತಾಲೂಕಿನ ಸರ್ವ ಸಮಾಜದ ಜನರು ಭಾಗಿಯಾಗಬೇಕು. ತಾಲೂಕು ಆಡಳಿತ ಸೌಧದ ಆವರಣದಲ್ಲಿ ಕೆಂಪೇಗೌಡರ ಜಯಂತ್ಯೋತ್ಸವ ಸಭಾ ಕಾರ್ಯಕ್ರಮ ನಡೆಯಲಿದ್ದು ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್‍ಗೌಡ ಕೆಂಪೇಗೌಡರನ್ನು ಕುರಿತು ಮಾತನಾಡಲಿದ್ದಾರೆ. ಶಾಸಕ ಹೆಚ್.ಟಿ.ಮಂಜು, ತಹಸೀಲ್ದಾರ್ ನಿಸರ್ಗಪ್ರಿಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ತಾಲೂಕಿನ ಎಲ್ಲಾ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಒಳಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಹಾದು ಕಾರ್ಯಕ್ರಮದ ವೇದಿಕೆಗೆ ಆಗಮಿಸಲಿದೆ. ವೀರಗಾಸೆ, ಡೋಲು, ನಂದಿ ಕಂಭ, ಕೋಲಾಟ ಸೇರಿದಂತೆ ವಿವಿಧ ಜನಪದ ಕಲಾತಂಡಗಳ ಪ್ರದರ್ಶನ ಹಾಗೂ ಮಂಗಳ ಕಳಸಗಳ ಮೂಲಕ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರು ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಜಾತ್ಯಾತೀತವಾಗಿ ಗುರುತಿಸಿ ಗೌರವಿಸಲಾಗುವುದು. ತಾಲೂಕು ಸಮಸ್ತ ಜಾತಿ ವರ್ಗಗಳ ಜನ ಜೂನ್ 27 ರ ಕೆಂಪೇಗೌಡರ ಜಯಂತಿಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ವಿವಿಧ ಒಕ್ಕಲಿಗರ ಸಂಘಟನೆಗಳಿಗೆ ಸೇರಿದ ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷರುಗಳಾದ ಬಂಡೀಹೊಳೆ ಅಶೋಕ್, ಕಟ್ಟೆಕ್ಯಾತನಹಳ್ಳಿ ಅಂಜನಿಗೌಡ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಸದಸ್ಯ ಶೀಳನೆರೆ ಭರತ್, ಬೋರೇಗೌಡ, ಮಹಾಲಿಂಗು, ಮೂಡನಹಳ್ಳಿ ಮಂಜೇಗೌಡ, ಪುರಸಭಾ ಸದಸ್ಯೆ ಪಂಕಜ ಪ್ರಕಾಶ್, ಒಕ್ಕಲಿಗ ಮಹಿಳಾ ಸಂಘಟನೆಯ ರೇಣುಕಾ ಚಂದ್ರು ಸುದ್ದಿಗೋಷ್ಠಿಯಲ್ಲಿದ್ದು ಮಾತನಾಡಿದರು.