ಮಾರ್ಟಳ್ಳಿ ಗ್ರಾಮ ಪಂ. ಅಭಿವೃದ್ಧಿ ಕೆಲಸ ಕುಂಠಿತ: ರಾಜ್ಯ ರೈತ ಸಂಘ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹನೂರು ಜೂ 21 :- ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಕೆಲಸ ಕಾರ್ಯಗಳು ಕುಂಠಿತವಾಗಿದೆ. ಇನ್ನಾದರೂ ಎಚ್ಚೆಚ್ಚು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂ. ಕಛೇರಿ ಮುಂಭಾಗ ಜಮಾಯಿಸಿದ ಪ್ರತಿಭಟನೆಕಾರರು ಅಭಿವೃದ್ಧಿ ಕಾರ್ಯ ಹಾಗೂ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು.
ಮಾರ್ಟಳ್ಳಿ ಗ್ರಾಮದಿಂದ ಗೊಡಸ್ ನಗರದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮರು ನವೀಕರಣ ಮಾಡಬೇಕು. ಹಾಗೂ ಅಂತೋಣಿಯರ್ ಕೋವಿಲ್, ಏರಿಕಾಡು ರಸ್ತೆ. ಸ್ಮಶಾನರಸ್ತೆ ವರೆಗೆ ರಸ್ತೆ ನಿರ್ಮಾಣ ಮಾಡಬೇಕು. ಆಂತೋನಿ ಕೊಯರ್ ಮತ್ತು ವೇಟಕಾಡು ತೆರೆದ ಬಾವಿ ಮುಚ್ಚಿಸಬೇಕು ಎಂದರಲ್ಲದೆ ಕೆರೆಗಳಲ್ಲಿ ಹೂಳು ತೆಗೆದು, ಜಮೀನುಮಟ್ಟ ಹಾಗೂ ರಿಮಿಟ್ಮೆಂಟ್ ಮಾಡಬೇಕು ಎಂದು ಒತ್ತಾಯಿಸಿದರು.
ನರೇಗ ಯೋಜನೆ ಅಡಿಯಲ್ಲಿ ಯಂತ್ರೋಪಕರಣ ಉಪಯೋಗಿಸದೆ ಕೂಲಿ ಕಾರ್ಮಿಕರಿಗೆ 100 ದಿನದ ಕೆಲಸವನ್ನು ಕಡ್ಡಾಯವಾಗಿ ನೀಡಬೇಕು, ಪಿಂಚಣಿ ರೂಪದಲ್ಲಿ ಹಣ ನೀಡಬೇಕು. ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇರಿದಂತೆ ವೈದ್ಯರ ಸೇವೆ ಲಭ್ಯವಾಗಬೇಕು. ವಡ್ಡರದೊಡ್ಡಿಯಲ್ಲಿ ತೊಂಬೆಗಳು ನಿರ್ಮಾಣವಾಗಿದ್ದು ನೀರು ಸರಬರಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದರು.
ಈ ಸ್ವತ್ತು ಮಾಡಿಸಲು ಏಳು ಸಾವಿರ ರೂ.ಹಣ ವಸೂಲಿ:
ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಈ-ಸ್ವತ್ತು ಮಾಡಿಸಲು 7 ಸಾವಿರ ರೂ. ಹೆಚ್ಚಿನ ಹಣ ವಸೂಲು ಮಾಡುತ್ತಿದ್ದಾರೆ ಎಂದು ಮಹಿಳೆಯರು ಆರೋಪ ಮಾಡಿದರು. ಮಹಿಳೆಯರಿಂದ ಪಡೆದಿರುವ ಹಣಕ್ಕೆ ರಶೀತಿ ನೀಡಬೇಕು. ಈ ಸ್ವತ್ತು ಮಾಡಿಸಲು ಪಡೆದಿರುವ ಏಳು ಸಾವಿರ ರೂ. ಹಿಂತಿರುಗಿಸಬೇಕು. ಶುಲ್ಕ ಹಾಗೂ ಅಗತ್ಯ ಮಾಹಿತಿ ನೋಟಿಸ್ ಬೋರ್ಡ್ ನಲ್ಲಿ ನಮೂದು ಮಾಡಬೇಕು. ಆಧಾರ್ ಸಮಸ್ಯೆ ಹೆಚ್ಚಾಗಿದೆ ಇದನ್ನು ಸರಿಪಡಿಸಲು ಸ್ಥಳದಲ್ಲಿ ಕೇಂದ್ರ ತೆಗೆಯಬೇಕು. ಸ್ವಚ್ಛತೆಗೆ ಆದ್ಯತೆ ನೀಡಿ ತ್ಯಾಜ್ಯಗಳನ್ನು ನಿಗದಿತ ಸ್ಥಳದಲ್ಲಿ ಶೇಖರಣೆ ಮಾಡಬೇಕು. ಯಾವುದೇ ರೀತಿ ಲಂಚ ಸ್ವೀಕಾರವಾಗಬಾರದು ಎಂದರು.
ಹನೂರು ತಾಲೂಕು ಪಂ. ನರೇಗಾ ಸಹಾಯಕ ನಿರ್ದೇಶಕ ರವೀಂದ್ರ ಹಾಗೂ ಮಾರ್ಟಳ್ಳಿ ಗ್ರಾಮ ಪಂ. ಕಾರ್ಯದರ್ಶಿ ನಾಗರಾಜು ಭೇಟಿ ನೀಡಿ ಪ್ರತಿಭಟನಕರಾರ ಸಮಸ್ಯೆ ಆಲಿಸಿ ಮನವಿ ಪತ್ರ ಸ್ವೀಕಾರ ಮಾಡಿದರು. ಬೇಡಿಕೆಗಳ ಬಗ್ಗೆ ಆಯ ಇಲಾಖೆಗೆ ಮಾಹಿತಿ ನೀಡಿ ನಂತರ ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನಲೆ ಪ್ರತಿಭಟನೆ ಕೈಬಿಟ್ಟರು.
ಮಾರ್ಟಳ್ಳಿ ಗ್ರಾಮ ಪಂ. ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಇಂದು ರೈತ ಸಂಘದಿಂದ ಮನವಿಯನ್ನು ಸಲ್ಲಿಸಿದ್ದೇವೆ. ಮುಂದಿನ 15 ದಿನಗಳ ಒಳಗೆ ನಾವು ಸಲ್ಲಿಸಿರುವ ಮನವಿಗೆ ಸ್ಪಂದಿಸಿ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಹನೂರು ತಾಲೂಕು ಕೇಂದ್ರ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಗೌಡೇಗೌಡ, ಕಾರ್ಯದರ್ಶಿ, ಶೈಲೇಂದ್ರ, ಹನೂರು ಘಟಕ ಅಧ್ಯಕ್ಷ ಅಮ್ಜಲ್ ಖಾನ್, ಉಪಾಧ್ಯಕ್ಷ ಪಳನಿ ಸ್ವಾಮಿ, ಮಾರ್ಟಳ್ಳಿ ರೈತ ಸಂಘದ ಅಧ್ಯಕ್ಷ ಅರ್ಪದರಾಜ್, ಜಾನಪೀಟರ್, ಮಾದೇಶ್, ಸೂಸೈ ಮಾಣಿಕ್ಯ, ಡೇವಿಡ್, ಅಂತೋನಿಸ್ವಾಮಿ ಪ್ರೇಮ, ಪೆÇನ್ನು ರಾಣಿ, ಕೂಡ್ಲೂರು ವೆಂಕಟೇಶ್ ಸೇರಿದಂತೆ ಇನ್ನಿತರ ಹಾಜರಿದ್ದರು.