ಯೋಗದಿಂದ ಲವಲವಿಕೆಯ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.22- ಯೋಗದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜೆಎಸ್‍ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಮಹದೇವಪ್ಪ ತಿಳಿಸಿದರು.
ಅವರು ನಗರದ ಜೆಎಸ್‍ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣಾ ಸೇವಾ ಸಮಿತಿಯ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ನಡೆದ 10ನೇ ವರ್ಷದ ವಿಶ್ವ ಯೋಗ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತ ದೇಶವು ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದೆ. ದೈನಂದಿನ ಕೆಲಸ ಕಾರ್ಯಗಳನ್ನು ಲವಲವಿಕೆಯಿಂದ ಮಾಡಲು ಯೋಗ ಸಹಕಾರಿಯಾಗಿದೆ. ಎಲ್ಲರು ಪ್ರತಿದಿನ ಕನಿಷ್ಟ ಒಂದು ಗಂಟೆಯಾದರು ಯೋಗಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಬೆಳಗಿನ ಜಾವ 6.45 ಗಂಟೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣಾ ಸೇವಾ ಸಮಿತಿಯ ಪ್ರಧಾನ ಸಂಚಾಲಕ ಯೋಗ ಪ್ರಕಾಶ ಮಾತನಾಡಿ ಸಂಸ್ಕಾರ, ಸಂಘಟನೆ ಮತ್ತು ಸೇವೆ ಎಂಬ ಮೂರು ಧ್ಯೇಯಗಳನ್ನಿಟ್ಟುಕೊಂಡು ಹಲವಾರು ವರ್ಷಗಳಿಂದ ಉಚಿತವಾಗಿ ಯೋಗಶಿಕ್ಷಣ ನೀಡುತ್ತಿದೆ. ನಿತ್ಯ ಯೋಗಭ್ಯಾಸ ಮಾಡುವುದರಿಂದ ಏನೆಲ್ಲಾ ಲಾಭಗಳು ಮನುಷ್ಯನಿಗೆ ದೊರೆಕುತ್ತಿದೆ ಎಂಬುದನ್ನು ತಿಳಿಸುವ ಜೊತೆಗೆ ಎಲ್ಲರು ಅರೋಗ್ಯವಂತ ಜೀವನಕ್ಕೆ ಪ್ರತಿ ನಿತ್ಯ ಯೋಗಭ್ಯಾಸ ಮಾಡಿ. ವಿಧ್ಯಾರ್ಥಿ ಜೀವನದಿಂದಲೇ ಯೋಗ ರೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಹಾಗೂ ಸದಾ ಲವಲವಿಕೆ ಮತ್ತು ಚೈತನ್ಯದಿಂದ ಇರಬಹುದು ಎಂದರು.
ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಗರದ ಶ್ರೀ ಪತಂಜಲಿ ಯೋಗ ಶಿಕ್ಷಣಾ ಸೇವಾ ಸಮಿತಿಯ ಯೋಗಬಂಧುಗಳು ಹಾಗೂ 400 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಸಾಮೂಹಿಕ ಯೋಗಭ್ಯಾಸ ಮಾಡುವ ಮೂಲಕ ವಿಶ್ವ ಯೋಗ ದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಯೋಗಶಿಕ್ಷಕರಾದ ದೊರೆಸ್ವಾಮಿ, ಲೋಕೇಶ್ವರಿ, ದೈಹಿಕ ಶಿಕ್ಷಕ ಮಂಜು, ಉಮೇಶ್, ಶಿಕ್ಷಕರಾದ ಕುಮಾರಸ್ವಾಮಿ, ಸುಮ, ರೂಪ, ಸಂಜೀವಿನ ಟ್ರಸ್ಟ್‍ನ ಸತೀಶ್, ಗೌರಿ, ಅಕ್ಷತ್‍ಜೈನ್, ನಾಗು ಮೊದಲಾದವರು ಇದ್ದರು.